ತಿರುವನಂತಪುರಂ: ಕೇರಳದಲ್ಲಿ ವರದಕ್ಷಿಣೆ ಸಾವು ಮತ್ತು ಕಿರುಕುಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಅನೇಕ ಪ್ರಕರಣಗಳಲ್ಲಿ ಸರ್ಕಾರಿ ನೌಕರರು ಕೂಡ ಆರೋಪಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರ್ಕಾರಿ ನೌಕರರು ವರದಕ್ಷಿಣೆ ಪಡೆದುಕೊಂಡಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಲಾಗಿದೆ.
ಮದುವೆಯಾಗಿರುವ ಪುರುಷ ಸರ್ಕಾರಿ ನೌಕರರು ಒಂದು ತಿಂಗಳ ಒಳಗೆ ತಾವು ವರದಕ್ಷಿಣೆ ಪಡೆದುಕೊಂಡಿಲ್ಲ ಮತ್ತು ಕೊಟ್ಟಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು. ಮಾತ್ರವಲ್ಲ, ಈ ಪ್ರಮಾಣಪತ್ರಕ್ಕೆ ಸರ್ಕಾರಿ ನೌಕರನ ಪತ್ನಿ, ತಂದೆ-ತಾಯಿ, ಮತ್ತು ಅತ್ತೆ -ಮಾವ ಕೂಡ ಸಹಿ ಹಾಕಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಕೇರಳದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಈ ಕಾಯ್ದೆಯನ್ವಯ ಸರ್ಕಾರಿ ನೌಕರರಿಗೆ ವರಕ್ಷಿಣೆ ಕೊಟ್ಟಿಲ್ಲ, ತೆಗೆದುಕೊಂಡಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಲಾಗಿದೆ. ವರದಕ್ಷಿಣೆಯ ಪ್ರಕರಣಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಲಾಗಿದೆ.