ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು ತಿಳಿದುಬಂದಿದೆ. ಮರಿಯಂ ತನ್ನ ನಿವಾಸದಲ್ಲಿ ಮಲಗಿದ್ದ ವೇಳೆ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್ ತೂರಿಕೊಂಡು ಯುವತಿಗೆ ನಾಟಿದೆ ಎಂದು ತಿಳಿದುಬಂದಿದೆ.
ಅಲಬಮಾದ ಮಾಂಟ್ಗೋಮೆರಿಯಲ್ಲಿ ಈ ಘಟನೆಯು ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೌತ್ ವೆಸ್ಟ್ ಅಮೆರಿಕ ಮಲಂಕರ ಆರ್ಥೋಡಾಕ್ಸ್ ಚರ್ಚ್ ಡಯಾಸಿಸ್ನ ಫಾದರ್ ಜಾನ್ಸನ್ ಪಪ್ಪಚನ್ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಸೂಸನ್ ಮ್ಯಾಥ್ಯೂ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸುಸನ್ಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಫೈರಿಂಗ್ ಆದ ತಕ್ಷಣವೇ ಸುಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಕಳೆದ 7 ದಿನಗಳಲ್ಲಿ ಮಾಂಟ್ಗೊಮೆರಿಯಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ. ಇದಕ್ಕೂ ಮೊದಲು ಗುರುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಡಲ್ಲಾಸ್ ಎಂಬಲ್ಲಿ ದರೋಡೆಕೋರರ ಗುಂಡಿನ ದಾಳಿಗೆ ಮತ್ತೊಬ್ಬ ಕೇರಳಿಗ ಬಲಿಯಾಗಿದ್ದಾನೆ. ಡಲ್ಲಾಸ್ನಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿದ್ದ ಸಜನ್ ಮ್ಯಾಥ್ಯೂಸ್ ಕೊಲೆಯಾದ ಕೇರಳಿಗ ವ್ಯಕ್ತಿ. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಮ್ಯಾಥ್ಯೂಸ್ ಮೇಲೆ ಗುಂಡು ಹಾರಿಸಿದ್ದಾರೆ.