ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ತ್ರಿಶ್ಶೂರಿನ ತಿರುವಿಲ್ವಾಮಾಲಾದ ಪಟ್ಟಿಪರಂಬು ಎಂಬಲ್ಲಿ ಜರುಗಿದೆ.
ಸೋಮವಾರ ಬೆಳಿಗ್ಗೆ 10:30ರ ವೇಳೆಗೆ, ಆದಿತ್ಯಶ್ರೀ ಹೆಸರಿನ ಮೂರನೇ ತರಗತಿ ವಿದ್ಯಾರ್ಥಿನಿ ಮೊಬೈಲ್‌ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಫೋಟದಿಂದಾಗಿ ಬಾಲಕಿಯ ಮುಖ ಹಾಗೂ ತಲೆ ಮೇಲೆ ತೀವ್ರವಾದ ಗಾಯಗಳಾಗಿವೆ.
ಮೂರು ವರ್ಷಗಳ ಹಿಂದೆ ಖರೀದಿ ಮಾಡಲಾದ ರೆಡ್ಮಿ 5 ಪ್ರೋ ಸ್ಮಾರ್ಟ್‌ಫೋನ್ ಒಂದನ್ನು ಬಾಲಕಿಯ ತಂದೆಗೆ ಆತನ ಸಹೋದರ ಸಂಬಂಧಿ ಉಡುಗೊರೆಯಾಗಿ ನೀಡಿದ್ದರು. ಇಲ್ಲಿನ ಪಳಯನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ ಬಾಲಕಿಯ ತಂದೆ.
“ಬಾಲಕಿಯ ಮುಖದಲ್ಲಿ ತೀವ್ರವಾದ ಗಾಯಗಳಾಗಿವೆ. ಆಕೆಯ ಬಲಗೈ ಬೆಳರುಳು ಹಾಗೂ ಅಂಗೈ ಸ್ಫೋಟದಲ್ಲಿ ತೀವ್ರವಾಗಿ ಹಾನಿಯಾಗಿವೆ,” ಎಂದು ವಿಚಾರಣಾಧೀನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತೀವ್ರವಾಗಿ ಶಾಖಗೊಂಡ ಕಾರಣ ಫೋನ್ ಹೀಗೆ ಸ್ಫೋಟಗೊಂಡಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಾಥಮಿಕ ತನಿಖಾ ವರದಿಯನ್ನು ವಿಧಿ ವಿಜ್ಞಾನ ತನಿಖಾ ತಂಡವು ಪೊಲೀಸರಿಗೆ ಒಪ್ಪಿಸಿದೆ.
ಚಾರ್ಜಿಂಗ್ ಆಗುವ ವೇಳೆ ಫೋನ್ ಬಳಸುವುದರಿಂದ ಮದರ್‌ಬೋರ್ಡ್ ಮೇಲೆ ಹೆಚ್ಚಿನ ಒತ್ತಡ ಬೀಳುವ ಕಾರಣ ಫೋನ್‌ನ ಸರ್ಕ್ಯೂಟ್ ಅತಿಯಾಗಿ ಶಾಖಗೊಳ್ಳುತ್ತದೆ. ಈ ವೇಳೆ ಫೋನ್‌ನ ಲಿಥಿಯಂ-ಐಯಾನ್ ಬ್ಯಾಟರಿ ಈ ಶಾಖದಿಂದ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.