ತಿರುವನಂತಪುರ: 10 ದಿನಗಳ ಹಿಂದೆ ಇಸ್ರೇಲ್‌ಗೆ ತೆರಳಿದ್ದ ಕೇರಳದ ಕೃಷಿಕ ಬಿಜು ಕುರಿಯನ್ ಪತ್ತೆಯಾಗಿದ್ದು, ಅವರು ಇಂದು ಭಾರತಕ್ಕೆ ಮರಳಲಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಪಿ ಪ್ರಸಾದ್ ತಿಳಿಸಿದ್ದಾರೆ.
ಕೇರಳ ಸರ್ಕಾರವು 27 ರೈತರ ಗುಂಪನ್ನು ಇಸ್ರೇಲ್‌ಗೆ ಕಳುಹಿಸಿತ್ತು. ದೇಶದಲ್ಲಿ ನಡೆಯುತ್ತಿರುವ ಆಧುನಿಕ ಕೃಷಿ ವಿಧಾನಗಳನ್ನು ಕಲಿಯಲು ಇಸ್ರೇಲ್‌ಗೆ ಕಳುಹಿಸಿತ್ತು. ಆದರೆ ಹೀಗೆ ಹೋಗಿರುವ ರೈತ ಬಿಜು ಹೊಟೇಲ್‌ನಿಂದ ನಾಪತ್ತೆಯಾಗಿದ್ದರು. ಈಗ ಪತ್ತೆಯಾಗಿದ್ದಾರೆ.
ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಜಾರ್ಜ್ ಕುರಿಯನ್ (48) ಕೊನೆಯದಾಗಿ ಇಸ್ರೇಲ್‌ನ ಹರ್ಜ್ಲಿಯಾ ನಗರದ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ನಂತರ ನಾಪತ್ತೆಯಾಗಿದ್ದರು. ಪ್ರದೇಶದ ಸಿಸಿ ಟಿವಿಗಳನ್ನು ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ.
ಈಗ ಪತ್ತೆಯಾಗಿರುವ ಅವರು, ದೇಶದ ಕೆಲವು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ತಾನು ಪ್ರವಾಸವನ್ನು ವಿಸ್ತರಿಸಿರುವುದಾಗಿ ಸಹೋದರನಿಗೆ ತಿಳಿಸಿರುವುದು ಬೆಳಕಿಗೆ ಬಂದಿದೆ! ಈ ಘಟನೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು.
ಅವರು ನಾಪತ್ತೆಯಾದ ಬಳಿಕ, ಅವರ ವೀಸಾ ಮತ್ತು ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸರ್ಕಾರ ವಿದೇಶಾಂಗ ಸಚಿವಾಲಯ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿತ್ತು. ಇದಾದ ಬಳಿಕ ಅವರು ಸಿಕ್ಕಿದ್ದಾರೆ.