ಕೊಚ್ಚಿ: ಮಹಿಳೆಯ ರಕ್ತನಾಳವನ್ನು ಕತ್ತರಿಸಿ ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಮೃತ ಪ್ರೇಮಿಯ ವಿರುದ್ಧ ಕೇಸ್ ದಾಖಲಾಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಾವನ್ನಪ್ಪಿದ ಆರೋಪಿಯನ್ನು ನಾದಿರ್ ಶಾ ಅಲಿ(30) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಆತ ಪಥಡಿಪಾಲಂನ 28 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಗುರುವಾರ ಸಂಜೆ ಆತ ಮಹಿಳೆಯನ್ನು ಪ್ರಮುಖ ವಿಚಾರವನ್ನು ಚರ್ಚಿಸುವ ನೆಪದಲ್ಲಿ ಕಾಂತಲ್ಲೂರು ಭ್ರಮರಂ ವ್ಯೂ ಪಾಯಿಂಟ್ ಗೆ ಕರೆದುಕೊಂಡು ಹೋಗಿದ್ದಾನೆ.
ಅಲಿ ಮತ್ತು ಮಹಿಳೆ ವಿಡಿಯೋ ಚಿತ್ರೀಕರಿಸಿದ್ದು, ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಲಾಗಿದೆ. ಇಬ್ಬರು ತಮ್ಮ ರಕ್ತನಾಳಗಳನ್ನು ಕತ್ತರಿಸಿಕೊಂಡ ನಂತರ, ಅಲಿ 250 ಅಡಿ ಆಳದ ಕಮರಿಗೆ ಧುಮುಕಿದ. ಮಹಿಳೆ ವ್ಯೂಪಾಯಿಂಟ್ ಬಳಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ.
ಅವರ ಆತ್ಮಹತ್ಯೆ ವಿಡಿಯೋವನ್ನು ರೆಕಾರ್ಡ್ ಮಾಡುವಾಗ, ಮಹಿಳೆ ತನ್ನ ಜೀವವನ್ನು ಕೊನೆಗೊಳಿಸಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಪ್ರಿಯಕರ ಅಲಿ ಬಲವಂತವಾಗಿ ಆಲಕೆಯ ರಕ್ತನಾಳವನ್ನು ಕತ್ತರಿಸಿದ್ದಾನೆ ಎಂದು ತಿಳಿಸಿದ್ದಾಳೆ. ಘಟನೆಗೂ ಮುನ್ನ ಅಲಿ ಆಭರಣ ಮತ್ತು ಮೊಬೈಲ್ ಅನ್ನು ಕಾರಿನಲ್ಲಿ ಇಡುವಂತೆ ಕೇಳಿಕೊಂಡಿದ್ದಾನೆ. ಆದರೆ, ಆಕೆ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದು, ಸಂಬಂಧಿಕರಿಗೆ ವಿಡಿಯೋ ಕಳುಹಿಸಿದ್ದಾಳೆ. ತಮ್ಮನ್ನು ಉಳಿಸಲು ಮನವಿ ಮಾಡಿದ್ದಾಳೆ. ಆದರೆ, ಯುವಕ ತನ್ನ ಫೋನ್ ಒಡೆದುಹಾಕಿದ್ದಾನೆ. ತನ್ನ ರಕ್ತನಾಳಗಳನ್ನು ಕತ್ತರಿಸಿಕೊಂಡು ಪ್ರಪಾತಕ್ಕೆ ಹಾರಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹಿಳೆಯ ಹೇಳಿಕೆಯ ಆಧಾರದ ಮೇಲೆ, ಮಹಿಳೆಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಈಗ ಅಲಿ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಮರವೂರು ಎಸ್.ಹೆಚ್.ಒ. ತಿಳಿಸಿದ್ದಾರೆ. ಅಲಿ ಬದುಕಿಲ್ಲವಾದ್ದರಿಂದ ಆರೋಪಪಟ್ಟಿ ಸಲ್ಲಿಸಿದ ನಂತರ ಪ್ರಕರಣವನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಲಾಗಿದೆ.