ಕೊಚ್ಚಿ: ಮಾನ್ಸನ್ ಮಾವುಂಕರ್ ಪ್ರಾಚ್ಯವಸ್ತು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಗುಗುಲೋತ್ ಲಕ್ಷ್ಮಣ್ ಅವರನ್ನು ಕೇರಳ ವಿಭಾಗದ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಐಜಿ ಲಕ್ಷ್ಮಣ್ ಕಲಮೆಶೆರಿ ಅಪರಾಧ ವಿಭಾಗದ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪುರಾತನ ವಸ್ತುಗಳ ವಂಚನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಲ್ಲಿ ಐಜಿ ಲಕ್ಷ್ಮಣ್ ಅವರೇ ಮಾಸ್ಟರ್ ಮೈಂಡ್ ಎಂದು ಕೇರಳ ಅಪರಾಧ ವಿಭಾಗ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಅಲ್ಲದೇ ಕ್ರೈಂ ಬ್ರ್ಯಾಂಚ್ ಐಜಿ ಲಕ್ಷ್ಮಣ್ ವಿರುದ್ಧ ಪಿತೂರಿ ಆರೋಪ ಕೂಡ ಮಾಡಿದೆ. ಸಧ್ಯ ತನಿಖೆಯಲ್ಲಿ ಲಕ್ಷ್ಮಣ್ ವಿರುದ್ಧ ಸಾಕಷ್ಟು ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿಸಿದೆ.
ಮಾನ್ಸನ್ ಮಾವುಂಕಲ್ ಪ್ರಾಚ್ಯ ವಸ್ತುಗಳ ವ್ಯಾಪಾರಿ ಹಾಗೂ ಹಲವು ಗಣ್ಯ ವ್ಯಕ್ತಿಗಳ ಪರಿಚಯವಿದೆ ಎಂದು ಕೋಟಿಗಟ್ಟಲೆ ಹಣ ಲಪಟಾಯಿಸಿದ್ದ. ಕೇರಳದ ನಕಲಿ ಪ್ರಾಚೀನ ವಸ್ತುಗಳ ವ್ಯಾಪಾರಿಯಾಗಿದ್ದು, ಈತನನ್ನು ಈ ಹಿಂದೆ ಕೇರಳ ಪೊಲೀಸರು ಬಂಧಿಸಿದ್ದರು. ಮಾನ್ಸನ್ ವಿರುದ್ಧ 10 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ ಅಲ್ಲದೇ ಬಾಲಕಿ ಮೇಲೆ ಅತ್ಯಾಚಾರ ಆರೋಪದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾನ್ಸನ್ ಜೊತೆ ಐಜಿ ಲಕ್ಷ್ಮಣ್ ಅವರಿಗೆ ನಿಕಟ ಸಂಪರ್ಕವಿದೆ ಅಲ್ಲದೇ ಆತನೊಂದಿಗೆ ಮಾತನಾಡಿರುವ ದೂರವಾಣಿ ಕರೆ, ಟವರ್ ಲೊಕೇಷನ್ ನ್ನು ಕೂಡ ಕೇರಳ ಅಪರಾಧ ವಿಭಾಗ ಪತ್ತೆ ಮಾಡಿದೆ.