ಕೇರಳ: ಕತಾರ್ನಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಮುಗಿದರೂ ಅದರ ಜ್ವರ ಮಾತ್ರ ಇದುವರೆಗೆ ಹರಡುತ್ತಲೇ ಇದೆ. ಫುಟ್ಬಾಲ್ ಅಭಿಮಾನಿಗಳಾಗಿರುವ ಇಲ್ಲೊಂದು ಜೋಡಿ ಫುಟ್ಬಾಲ್ ಆಟಗಾರರ ಜರ್ಸಿ ತೊಟ್ಟು ಮದುವೆ ಮಾಡಿಕೊಂಡಿದ್ದಾರೆ.
ಕೇರಳದ ಸಚಿನ್ ಆರ್. ಮತ್ತು ಆರ್. ಅಥಿರಾ ಈ ಜೋಡಿಯಾಗಿದ್ದು, ಇವರ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿನ್-ಅಥಿರಾ ಮದುವೆ ದಿನದಂದೇ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವಿತ್ತು. ಫ್ರಾನ್ಸ್ ಹಾಗೂ ಅರ್ಜೆಂಟೀನಾದ ನಡುವೆ ಅಂತಿಮ ಸ್ಪರ್ಧೆ ನಡೆಯುತ್ತಿರುವಾಗಿ ಜೋಡಿ ಸಪ್ತಪದಿ ತುಳಿದಿದೆ. ಈ ಸಂದರ್ಭದಲ್ಲಿ ಆ ಎರಡೂ ದೇಶಗಳ ತಮ್ಮ ನೆಚ್ಚಿನ ಆಟಗಾರರ ಜರ್ಸಿಯನ್ನು ವಧು-ವರರು ತೊಟ್ಟಿದ್ದರು.
ಅರ್ಜೆಂಟೀನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಅಭಿಮಾನಿಯಾಗಿರುವ ಸಚಿನ್ ಮೆಸ್ಸಿ ಜರ್ಸಿ ತೊಟ್ಟರೆ, ಫ್ರಾನ್ಸ್ ಆಟಗಾರ ಎಂಬಪ್ಪೆ ಜರ್ಸಿಯನ್ನು ಅಥಿರಾ ತೊಟ್ಟಿದ್ದರು. ಆ ಮೂಲಕ ಆಟಗಾರರ ಬಗ್ಗೆ ತಮಗಿರುವ ಅಭಿಮಾನವನ್ನು ಜೋಡಿ ತೋರಿಸಿಕೊಂಡಿದ್ದಾರೆ.