ರೈಲಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಟಿಕೆಟ್ ಪಡೆಯದೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸ್ ಪೇದೆ ಬೂಟುಗಾಲಿನಿಂದ ಒದ್ದು ಹಲ್ಲೆ ಮಾಡಿದ್ದರು ಎನ್ನಲಾಗಿತ್ತು.
ಅಲ್ಲದೇ, ಹಲ್ಲೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟ ವೈರಲ್ ಆಗಿತ್ತು. ಸಾರ್ವಜನಿಕರು ಈ ವಿಡಿಯೋ ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ಮಾವೇಲಿ ಎಕ್ಸ್ ಪ್ರೆಸ್ ರೈಲು ಕಣ್ಣೂರಿಗೆ ತಲುಪಿದ್ದ ಸಂದರ್ಭದಲ್ಲಿ ನಡೆದಿದೆ. ಅಲ್ಲಿ ಪೊಲೀಸರು ಟಿಕೆಟ್ ಪರಿಶೀಲನೆಗಾಗಿ ರೈಲು ಹತ್ತಿದ್ದರು. ವ್ಯಕ್ತಿಯೊಬ್ಬ ರೈಲಿನಲ್ಲಿ ಕೆಳಗೆ ಕುಳಿತಿರುತ್ತಾನೆ. ಆಗ ರೈಲು ಹತ್ತಿದ ಪೊಲೀಸ್ ಪೇದೆ, ಪರಿಶೀಲಿಸಿ, ಆತ ಟಿಕೆಟ್ ಪಡೆಯದೆ ಹತ್ತಿದ್ದಾನೆ ಎಂದು ಬೂಟುಗಾಲಿನಿಂದ ಒದ್ದಿದ್ದಾರೆ.
ಈ ಸಂದರ್ಭದಲ್ಲಿ ರೈಲಿನಲ್ಲಿ ಟಿಟಿಇ ಕೂಡ ಇದ್ದರು. ಆದರೆ, ಅವರು ಪೊಲೀಸರನ್ನು ತಡೆಯುವ ಕಾರ್ಯ ಮಾಡಿಲ್ಲ. ಈ ವಿಡಿಯೋವನ್ನು ರೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಪೊಲೀಸರಿಗೆ ಸಹಕಾರ ನೀಡಿರುವ ಟಿಟಿಇಯನ್ನು ಕೂಡ ವಜಾ ಮಾಡಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ನಾಯಕರು ಕೂಡ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.