ನವದೆಹಲಿ: ಕಠಿಣ ಪರಿಶ್ರಮ ಮತ್ತು ಗುರಿಯೊಂದಿದ್ದರೆ ಸಾಧನೆಗೆ ಅಸಾಧ್ಯವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಒಬ್ಬ ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಯಾರೂ ಅವನನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಸಾಧಕನೊಬ್ಬನ ಮಾಹಿತಿ ಇಲ್ಲಿದೆ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ(UPSC) ಉತ್ತೀರ್ಣರಾಗಲು ಬಹುತೇಕರು ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಭಾವದೊಂದಿಗೆ ಅಧ್ಯಯನಕ್ಕಾಗಿ ಒಂದಕ್ಕಿಂತ ಹೆಚ್ಚು ಕೋಚಿಂಗ್ ಸೆಂಟರ್ ಗಳನ್ನು ಆಶ್ರಯಿಸುತ್ತಾರೆ.
ಆದರೆ, ಕೇರಳದ ಶ್ರೀನಾಥ್ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀನಾಥ್ ರೈಲ್ವೇ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಾರೆ. ಅವರು ಮೊದಲು ಕೇರಳ ಸಾರ್ವಜನಿಕ ಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಅವರು ಯುಪಿಎಸ್‌ಸಿಯಲ್ಲೂ ಯಶಸ್ಸನ್ನು ಪಡೆದಿದ್ದಾರೆ.
ಶ್ರೀನಾಥ್ ಮುನ್ನಾರ್ ನವರಾಗಿದ್ದಾರೆ. ತಮ್ಮ ಕುಟುಂಬವನ್ನು ಪೋಷಿಸಲು ಎರ್ನಾಕುಲಂನಲ್ಲಿ ಪೋರ್ಟರ್ ಆಗಿ ಕೆಲಸ ಮಾಡಿದ್ದಾರೆ. ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದಿಸುವವರು. 2018 ರಲ್ಲಿ, ಅವರು ತಮ್ಮ ಕಡಿಮೆ ಆದಾಯದ ಕಾರಣದಿಂದ ತಮ್ಮ ಮಗಳ ಭವಿಷ್ಯಕ್ಕೆ ರಾಜಿಯಾಗದಂತೆ ಶ್ರಮಿಸಲು ನಿರ್ಧರಿಸಿ ನಾಗರಿಕ ಸೇವೆಗಳ ಪರೀಕ್ಷೆ ಅಧ್ಯಯನದಲ್ಲಿ ತೊಡಗಲು ನಿರ್ಧರಿಸಿದರು. ಆದರೆ, ಹಣಕಾಸಿನ ಅಡಚಣೆಗಳು ಅವರನ್ನು ಕಾಡಿದವು.
ಕೋಚಿಂಗ್ ಸೆಂಟರ್ ನ ಶುಲ್ಕ ಕಟ್ಟಲು ಆಗುವುದಿಲ್ಲ ಎಂದು ಗೊತ್ತಿತ್ತು. ಇದಾದ ನಂತರ ಅವರು ಕೆಪಿಎಸ್‌ಸಿಗೆ ತಯಾರಿ ನಡೆಸಲು ಮತ್ತೊಂದು ಮಾರ್ಗ ಕಂಡುಕೊಂಡರು. ಜನವರಿ 2016 ರಲ್ಲಿ ಮುಂಬೈ ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ ಪ್ರಾರಂಭಿಸಲಾಯಿತು. ಆದ್ದರಿಂದ ಅವರು ಸ್ಮಾರ್ಟ್ ಫೋನ್ ಮೂಲಕ ಅಧ್ಯಯನ ಮಾಡಲು ಪ್ರಾರಂಭಿಸಿದರು. ಉಚಿತ ವೈಫೈ ಸಹಾಯದಿಂದ ಶ್ರೀನಾಥ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವಾಗ ಆನ್‌ಲೈನ್ ಉಪನ್ಯಾಸಗಳನ್ನು ಕೇಳುತ್ತಿದ್ದರು. ಕೆಪಿಎಸ್‌ಸಿಯಲ್ಲಿ ತೇರ್ಗಡೆಯಾದ ನಂತರ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಶ್ರೀನಾಥ್ ಐಎಎಸ್ ಆಗಿದ್ದು, ಅವರು ಕೆಲವು ವಿಫಲ ಪ್ರಯತ್ನಗಳ ನಂತರ ಹತಾಶರಾಗುವ, ಸಂಪನ್ಮೂಲಗಳ ಕೊರತೆಯಿಂದ ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆಯಿಲ್ಲದ, ಕುಟುಂಬದ ಜವಾಬ್ದಾರಿಗಳು ಮತ್ತು ಸ್ವಂತ ಕನಸುಗಳ ನಡುವೆ ಸಿಲುಕಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವಂತ ಸ್ಫೂರ್ತಿಯಾಗಿದ್ದಾರೆ.