ಸೋಶಿಯಲ್ ಮೀಡಿಯಾ ಲೋಕದಲ್ಲಿ ವೆರೈಟಿ-ವೆರೈಟಿ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ತೆ. ಕೆಲ ವಿಡಿಯೋಗಳು ನಗು ತರಿಸಿ ವೈರಲ್ ಆಗ್ತಿರುತ್ತೆ. ಇನ್ನು ಕೆಲ ವಿಡಿಯೋಗಳು ಭಾವುಕರನ್ನಾಗಿಸಿ ವೈರಲ್ ಆಗುತ್ತೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ವೈರಲ್ ಆಗಿರೋ ಈ ವಿಡಿಯೋ ಕೇರಳದ್ದಾಗಿದೆ.
ಇಲ್ಲಿ ಬಸ್ ಚಾಲಕನೊಬ್ಬ ರಸ್ತೆ ಪಕ್ಕದಲ್ಲಿ ಹೋಗುತ್ತಿರುವ, ಮಕ್ಕಳಿಬ್ಬರಿಗೆ ಬಿಸ್ಕೆಟ್ ಹಾಗೂ ಬೇರೆ ತಿಂಡಿಯ ಪೊಟ್ಟಣಗಳನ್ನ ಕೊಡುತ್ತಿರುವುದನ್ನ ಗಮನಿಸಬಹುದು. ಆ ಪುಟಾಣಿಗಳು ಹಸಿದಿದ್ದವೋ ಏನೋ, ಡ್ರೈವರ್ ಕೊಟ್ಟ ತಿಂಡಿಯನ್ನ ಖುಷಿಯಿಂದ ತೆಗೆದುಕೊಂಡಿದ್ದವು. ಆ ಮಕ್ಕಳ ನಿಷ್ಕಲ್ಮಶ ನಗುವೇ ಸಾಕ್ಷಿ, ಆ ಮಕ್ಕಳಿಬ್ಬರಿಗೆ ಎಷ್ಟು ಖುಷಿಯಾಗಿತ್ತು ಅಂತ. ಕೆಲವೇ ಕೆಲ ಸೆಕೆಂಡ್ ವಿಡಿಯೋ ಕೊನೆಯಲ್ಲಿ ಮಕ್ಕಳಿಬ್ಬರೂ ನಗ್ತಾ ನಗ್ತಾ ಆ ಬಸ್ ಡ್ರೈವರ್‌ಗೆ ಟಾಟಾ ಮಾಡುತ್ತವೆ.
ಆ ಮಕ್ಕಳಿಬ್ಬರ ಮುಖದ ಮಂದಹಾಸ ನೋಡಿ ಆ ಬಸ್ ಚಾಲಕನಿಗೆ ಎಷ್ಟು ಖುಷಿಯಾಗಿತ್ತೋ, ಅಷ್ಟೆ ಖುಷಿ ಈ ವಿಡಿಯೋ ನೋಡಿದ ನೆಟ್ಟಿಗರಿಗೂ ಆಗಿದೆ. ಅಷ್ಟೆ ಅಲ್ಲ ಭಾವುಕರಾಗಿದ್ದಾರೆ ಕೂಡ. ಈ ವಿಡಿಯೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ‘ಫೇವೆಸ್ಸಿ….‘ ಅನ್ನುವವರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನ ಈಗಾಗಲೇ 22 ಸಾವಿರಕ್ಕೂ ಹೆಚ್ಚು ಜನರು ನೋಡಿ ಇಷ್ಟಪಟ್ಟಿದ್ದಾರೆ.
ಈ ವಿಡಿಯೋ ಶೀರ್ಷಿಕೆಯಲ್ಲಿ ಮಲೆಯಾಳಂನಲ್ಲಿ, “ ಜೀವನ ಎಂಬ ಪ್ರಯಾಣದಲ್ಲಿ ನಾವು ಅನೇಕರನ್ನ ಭೇಟಿಯಾಗುತ್ತೇವೆ. ಈ ಪ್ರಯಾಣದ ಮಧ್ಯದಲ್ಲಿ ಅನೇಕರ ಹಸಿವು-ಬಾಯಾರಿಕೆ ನೀಗಿಸಲು ನಮಗೆ ತುಂಬಾ ಕಡಿಮೆ ಅವಕಾಶ ಸಿಗುತ್ತೆ. ಹಸಿವು ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳುವುದಕ್ಕೂ ಮನಸ್ಸು ಇರಬೇಕು. ಬೇರೆಯವರ ಹಸಿವಿನ ನೋವು ಏನು ಅನ್ನೊದನ್ನ ಅರ್ಥ ಮಾಡಿಕೊಳ್ಳುವ ನಮಗೆ ಶಕ್ತಿ ಇದೆ. ಅದರಿಂದ ಬೇರೆಯವರಿಗೆ ಸಮಯ ಸಿಕ್ಕಾಗೆಲ್ಲ ಸಹಾಯ ಮಾಡಿ“ ಎಂದು ಬರೆಯಲಾಗಿದೆ. ಇದನ್ನ ನೋಡಿ ಅನೇಕ ನೆಟ್ಟಿಗರು ಇದು ಸತ್ಯವಾದ ಮಾತು ಎಂದು ಕಾಮೆಂಟ್ ಮಾಡಿ ಈ ವಿಡಿಯೋವನ್ನ ಲೈಕ್ ಮಾಡಿದ್ದಾರೆ.