ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ದೋಣಿ ಮುಳುಗಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವ ವಿ. ಅಬ್ದುರಹಿಮಾನ್ ಮಾಹಿತಿ ನೀಡಿದ್ದಾರೆ.
ಮಲಪುರಂ ಜಿಲ್ಲೆಯ ತೋವಲ್ ತೀರಂ ಕಡಲ ತೀರದಲ್ಲಿ ಭಾನುವಾರ ಸಂಜೆ ಘಟನೆ ನಡೆದಿದ್ದು, 5 ಮಕ್ಕಳು ಸೇರಿದಂತೆ 18 ಜನ ಸಾವನ್ನಪ್ಪಿದ್ದಾರೆ. ಸುಮಾರು 40 ರಿಂದ 50 ಮಂದಿ ಬೋಟ್ ನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಬಹುತೇಕರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಚರಣೆ ನಡೆಸಲಾಗಿದೆ. ಇಂತಹ ಪ್ರವಾಸಿ ಬೋಟ ಗಳಿಗೆ ಸಂಜೆ 5 ಗಂಟೆ ನಂತರ ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಎರಡು ಅಂತಸ್ತಿನ ಕೇವಲ ಎರಡು ಬಾಗಿಲುಗಳಿರುವ ಬೋಟ್ ಕಾರ್ಯಾಚರಣೆ ನಡೆಸುತ್ತಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ್ದ ಕಾರಣ ಏಕಾಏಕಿ ಮಗುಚಿ ಕೊಂಡಿದೆ.
ಅಗ್ನಿಶಾಮಕ ಮತ್ತು ಪೊಲೀಸ್ ಘಟಕಗಳು, ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪೊಲೀಸರ ಪ್ರಕಾರ ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ನೀರಿನಿಂದ ರಕ್ಷಿಸಿದವರನ್ನು ಸಮೀಪದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪ್ರಧಾನಿ ಮೋದಿ ಎಕ್ಸ್ ಗ್ರೇಷಿಯಾ ಘೋಷಣೆ
ದೋಣಿ ದುರಂತದಿಂದ ಸಂಭವಿಸಿದ ಜೀವಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಮುಂದಿನ ಬಂಧುಗಳಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. “ಕೇರಳದ ಮಲಪ್ಪುರಂನಲ್ಲಿ ಸಂಭವಿಸಿದ ದೋಣಿ ದುರಂತದಿಂದ ಪ್ರಾಣಹಾನಿಯಿಂದ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು. ಪಿಎಂಎನ್‌ಆರ್‌ಎಫ್‌ನಿಂದ ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ರೂ 2 ಲಕ್ಷ ಪರಿಹಾರವನ್ನು ನೀಡಲಾಗುವುದು” ಎಂದು ಪಿಎಂಒ ತಿಳಿಸಿದೆ.
ಪ್ರಾಣ ಹಾನಿಗೆ ಸಿಎಂ ವಿಜಯನ್ ಸಂತಾಪ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಾವಿಗೆ ಸಂತಾಪ ಸೂಚಿಸಿ ಹೇಳಿಕೆ ನೀಡಿದ್ದು, ಸಂಘಟಿತ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.