ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಆರೋಪಕ್ಕೆ ಇದೀಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದ್ದು, ಧ್ವಜ ವಿವಾದ ಆರಂಭವಾಗಲು ಕಾಂಗ್ರೆಸ್ ಕಾರಣ ಎಂದಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಪುಟ್ಟರಾಜು, ಕೆರಗೋಡಿನಲ್ಲಿ ಧ್ವಜಸ್ತಂಭ ವಿಚಾರವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಶಾಸಕ ಗಣಿಗ ರವಿ ಎಂದು ನೇರ ಆರೋಪ ಮಾಡಿದರು.
ಪಕ್ಷಾತೀತವಾಗಿ ಧ್ವಜಸ್ತಂಭ ನಿರ್ಮಿಸಬೇಕು ಎಂದು ಶಾಸಕರೇ ಹೇಳಿದ್ದರು. ಜನವರಿ 22ರಂದು ನಾನೇ ಜವಾಬ್ದಾರಿ ತೆಗೆದುಕೊಂಡು ಉದ್ಘಾಟನೆ ಮಾಡುತ್ತೇನೆ ಎಂದು ಗಣಿಗ ರವಿ ಹೇಳಿದ್ದರು. ಜನವರಿ 22ರಂದು ಧ್ವಜಸ್ತಂಭ ಉದ್ಘಾಟನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬರುವವರಿದ್ದರು ಆದರೆ ಅವರು ಅಯೋಧ್ಯೆಗೆ ಹೋಗಿದ್ದರಿಂದ ಸಾಧ್ಯವಾಗಲಿಲ್ಲ. ನಮ್ಮ ಬಳಿ ನೀವು ಹೋಗಿ ಎಂದಿದ್ದರು. ನಾವು ಕೆರಗೋಡು ಬಳಿ ಹೋಗುತ್ತಿದ್ದಗ ಗ್ರಾಮಸ್ಥರು ನಮ್ಮ ಬಳಿ ಧ್ವಜಸ್ತಂಭ ಪೂಜೆ ನೀವೇ ಮಾಡಿ ಎಂದಿದ್ದಾರೆ. ಗ್ರಾಮಸ್ಥರ ಮನವಿಯಂತೆ ನಾವು ಮಾಡಿದೆವು. ಇದನ್ನು ಶಾಸಕ ಗಣಿಗ ರವಿಗೆ ಸಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ಶಾಸಕರು ಧ್ವಜ ಇಳಿಸುವ ಕೆಲಸಕ್ಕೆ ಮುಂದಾದರು. ಧ್ವಜ ವಿವಾದಕ್ಕೆ ಕಾಂಗ್ರೆಸ್ ಶಾಸಕ ಗಣಿಗ ರವಿ ಕಾರಣ ಎಂದು ಆರೋಪಿಸಿದ್ದಾರೆ.