ಕೀನ್ಯಾದ ನೈರಿ ಕೌಂಟಿಯಲ್ಲಿರುವ ಹಿಲ್‌ಸೈಡ್ ಎಂಡರಾಶಾ ಅಕಾಡೆಮಿ ಎಂಬ ಪ್ರಾಥಮಿಕ ಬೋರ್ಡಿಂಗ್ ಶಾಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 17 ಬಾಲಕರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ.
ಮೃತರು 4 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಅವರೆಲ್ಲ 9 ಮತ್ತು 13 ವರ್ಷದೊಳಗಿನವರಾಗಿದ್ದಾರೆ. ಬೆಂಕಿಯ ಕಾರಣ ಅಸ್ಪಷ್ಟವಾಗಿ ಉಳಿದಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ವಕ್ತಾರ ರೆಸಿಲಾ ಒನ್ಯಾಂಗೊ ಹೇಳಿದ್ದಾರೆ.
ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ, 156 ವಿದ್ಯಾರ್ಥಿಗಳು ಇರುವ ವಸತಿ ನಿಲಯದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ಬಂದ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಫೋರೆನ್ಸಿಕ್ ತಂಡಗಳು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕೀನ್ಯಾವು ಇಂತಹ ಘಟನೆಗಳ ಹಲವಾರು ಇತಿಹಾಸ ಹೊಂದಿದೆ. ನೈರೋಬಿಯಲ್ಲಿ 2017 ರಲ್ಲಿ ಒಂಬತ್ತು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. 2001 ರ ದುರಂತವು 58 ಶಾಲಾ ಬಾಲಕರ ಜೀವವನ್ನು ತೆಗೆದುಕೊಂಡಿತು.