ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಟರ್ಮಿನಲ್-2 ನಿಂದ ಇಂದಿನಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಿದೆ.
ಇಂದು ಬೆಳಿಗ್ಗೆ 10-45ಕ್ಕೆ ಟರ್ಮಿನಲ್-2ಗೆ ಸೌದಿ ಅರೇಬಿಯಾದಿಂದ ಮೊದಲ ವಿದೇಶಿ ವಿಮಾನ ಬಂದಿಳಿದಿದೆ. ಈ ಮೂಲಕ ಕೆಂಪೇಗೌಡ ಏರ್ ಪೋರ್ಟ್ ಎಂ.ಡಿ ಹರಿಮಾರನ್ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಿದ್ದಾರೆ. ಸೌದಿಯಿಂದ ಬಂದ ಮೊದಲ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಯಕ್ಷಗಾನ, ಡೊಳ್ಳು ಕುಣಿತದ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ವೈಭವದೊಂದಿಗೆ ಹೂಗಳನ್ನು ನೀಡಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಹಳೆಯ ಟರ್ಮಿನಲ್-1 ದೇಶೀಯ ವಿಮಾನಗಳ ಹಾರಾಟಕ್ಕೆ ಮೀಸಲಿಡಲಾಗುತ್ತಿದೆ. ಟರ್ಮಿನಲ್-2 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ವಿವಿಧ ಬಗೆಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿದೆ. ಈ ಟರ್ಮಿನಲ್ ನ್ನು ಇನ್ ದಿ ಗಾರ್ಡನ್ ಎಂದು ಕರೆಯಲಾಗುತ್ತಿದೆ.
ಈ ಟರ್ಮಿನಲ್ ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯಗಳು, 3600ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲಗಳಿವೆ. 10 ಸಾವಿರ ಚದರ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಫಾಲ್ಸ್ ಜೊತೆಗೆ ನೂರಾರು ವರ್ಷಗಳ ಹಳೆಯ ಮರಗಳನ್ನು ಟರ್ಮಿನಲ್ -2 ಹೊಂದಿದೆ.