ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಮಹಿಳೆಯೇ ಚಲಾಯಿಸುವ ಗುಲಾಬಿ ಟ್ಯಾಕ್ಸಿಗೆ ಚಾಲನೆ ನೀಡಲಾಗಿದೆ. ಪರಿಸರಕ್ಕೆ ಪೂರಕವಾದ ಎರಡು ಬಣ್ಣದ ಎಲೆಕ್ಟ್ರಿಕ್ ಟ್ಯಾಕ್ಸಿ ಆರಂಭವಾಗಿದ್ದು, ಒಂದು ನೀಲಿ ಬಣ್ಣದ ಹಾಗೂ ಇನ್ನೊಂದು ಗುಲಾಬಿ ಬಣ್ಣದ ಟ್ಯಾಕ್ಸಿಗೆ ಚಾಲನೆ ದೊರೆತಿದೆ.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್ SUV ಎಲೆಕ್ಟ್ರಿಕ್ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ. ಚಾಲನೆ ನೀಡಿದರು.
ತಿಳಿನೀಲಿ ಬಣ್ಣದ ಎಲೆಕ್ಟ್ರಿಕ್ ಟ್ಯಾಕ್ಸಿಗಳು ಎಲ್ಲರೂ ಬಳಸಬಹುದಾಗಿದ್ದು, ಈ ಬಣ್ಣವು ಸುಸ್ಥಿರತೆಯನ್ನು ಒತ್ತಿ ಹೇಳುತ್ತದೆ. ಇನ್ನು, ಗುಲಾಬಿ ಬಣ್ಣದ ಎಲೆಕ್ಟ್ರಿಕ್ ಟ್ಯಾಕ್ಸಿಗಳು ಮಹಿಳೆಯರಿಗಾಗಿ ಮೀಸಲಿಟ್ಟಿದ್ದು, ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕಿಯರೇ ಚಲಾಯಿಸಲಿರುವುದು ವಿಶೇಷ.
ಪ್ರತಿ ಪ್ರಯಾಣಿಕರಿಗೆ ಡ್ಯೂಟಿ ಮ್ಯಾನೇಜರ್, ಸ್ಥಳೀಯ ಪೊಲೀಸ್ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಿರುವ ಪೂರಕ “ಪಿಂಕ್ ಕಾರ್ಡ್” ಅನ್ನು ಸಹ ಒದಗಿಸಲಾಗುತ್ತದೆ. ಇದರಿಂದ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಅರೆ-ರೊಬೊಟಿಕ್ ವಿಮಾನ ಟೋಯಿಂಗ್ ವಾಹನಗಳು ಮತ್ತು EV ವಾಹನಗಳನ್ನು ಏರ್‌ಸೈಡ್ ಮತ್ತು ಲ್ಯಾಂಡ್‌ಸೈಡ್ ಎರಡೂ ಕಡೆಯಲ್ಲೂ ಅನುಷ್ಠಾನಗೊಳಿಸಲಾಗಿದೆ.