ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಎಎಪಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಆಸ್ಪತ್ರೆಯಲ್ಲಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭೇಟಿ ಮಾಡಿದರು. ಭೇಟಿಯ ನಂತರ ಅವರನ್ನು “ಧೈರ್ಯಶಾಲಿ” ಮತ್ತು “ಹೀರೋ” ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ.
ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಕೇಜ್ರಿವಾಲ್, ಸತ್ಯೇಂದ್ರ ಜೈನ್ ಅವರನ್ನು ಅಪ್ಪಿಕೊಂಡು ಆಸ್ಪತ್ರೆಯಲ್ಲಿ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಿಸಿದರು ಎಂದು ಎಎಪಿ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಸತ್ಯೇಂದ್ರ ಜೈನ್, ಕಳೆದ ವಾರ ಜೈಲಿನ ವಾಶ್ ರೂಂನಲ್ಲಿ ತಲೆ ಸುತ್ತಿ ಬಿದ್ದಿದ್ದರು.
ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮೊದಲು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಅವರನ್ನು ಲೋಕನಾಯಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಶುಕ್ರವಾರ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ತಲೆಗೆ ಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದ ಕಾರಣ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಸತ್ಯೇಂದ್ರ ಜೈನ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ನಂತರ ಫೋಟೋಗಳನ್ನು ಹಂಚಿಕೊಂಡಿರುವ
ಅರವಿಂದ್ ಕೇಜ್ರಿವಾಲ್, “ಧೈರ್ಯಶಾಲಿಯನ್ನು ಭೇಟಿಯಾದೆನು. ಹೀರೋ……” ಎಂದು ಹೇಳಿದ್ದಾರೆ.
ಸತ್ಯೇಂದ್ರ ಜೈನ್ ಅವರನ್ನು ಮೇ 30, 2022 ರಂದು ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿತು. ಪ್ರಸ್ತುತ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.