
ಗಣೇಶ ಚತುರ್ಥಿಯಂದು ಅನೇಕರು ಮನೆಯಲ್ಲಿ ಅಥವಾ ಸಾರ್ವಜನಿಕ ಪೆಂಡಾಲ್‌ನಲ್ಲಿ ಗಣಪತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ. ವಿನಾಯಕನ ಪ್ರತಿಷ್ಠಾಪನೆ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಮಣ್ಣಿನ ಗಣೇಶ ವಿಗ್ರಹವನ್ನು ಮಾತ್ರ ತರಬೇಕು. ಅವುಗಳನ್ನು ಮೂರು, ಐದು, ಏಳು ದಿನಗಳು ಅಥವಾ ಹತ್ತು ದಿನಗಳವರೆಗೆ ಇಡಬಹುದು.
ಗಣೇಶ ಮೂರ್ತಿಯನ್ನು ಸ್ವಚ್ಛವಾದ ಜಾಗದಲ್ಲಿ ಪ್ರತಿಷ್ಠಾಪಿಸಬೇಕು. ಹಳದಿ ಬಟ್ಟೆಯಿಂದ ಅಲಂಕರಿಸುವುದು ಅತ್ಯಂತ ಶ್ರೇಷ್ಠ. ಅಷ್ಟೇ ಅಲ್ಲ ಭಕ್ತರು ಕೂಡ ಹಳದಿ ಬಟ್ಟೆಯನ್ನು ಧರಿಸಬೇಕು. ವಿಗ್ರಹದ ಮುಂದೆ ಒಂದು ಕಲಶವನ್ನು ಇಟ್ಟು ಅದರಲ್ಲಿ ವೀಳ್ಯದೆಲೆ ಮತ್ತು ಕೆಲವು ನಾಣ್ಯಗಳನ್ನು ಇರಿಸಿ. ಶ್ರೀ ಗಣೇಶನ ಮುಂದೆ ಇರುವ ಕಲಶವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಭಕ್ತರ ಖಜಾನೆಯು ಯಾವಾಗಲೂ ತುಂಬಿರುತ್ತದೆ. ವಿಗ್ರಹಕ್ಕೆ ಪಂಚಾಮೃತ ಮತ್ತು ಗಂಗಾಜಲದಿಂದ ಸ್ನಾನ ಮಾಡಿಸಿದ ನಂತರ ಕುಳಿತುಕೊಳ್ಳಲು ಪ್ರಾರ್ಥಿಸಿ.
ಕುಂಕುಮ, ಅಕ್ಷತೆಯೊಂದಿಗೆ ತಿಲಕವಿಟ್ಟು ಹಾರ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿ ಮತ್ತು ದೀಪವನ್ನು ಬೆಳಗಿಸಿ. ಗಣೇಶನಿಗೆ ಮೋದಕ ಬಲುಪ್ರಿಯ. ಆದ್ದರಿಂದ ಅವರಿಗೆ ಮೋದಕವನ್ನು ಅರ್ಪಿಸಿ. ಜೊತೆಗೆ ಲಡ್ಡುಗಳನ್ನು ಸಹ ಅರ್ಪಿಸಬಹುದು.
ಗರಿಕೆ ಗಣೇಶ ಪೂಜೆಯಲ್ಲಿ ಬಹಳ ಶ್ರೇಷ್ಠ. ಆದರೆ ತುಳಸಿ ದಳವನ್ನು ಅರ್ಪಿಸಬಾರದು. ಗಣೇಶ ಇರುವ ಸ್ಥಳವನ್ನು ಶುಚಿಗೊಳಿಸುವುದರ ಜೊತೆಗೆ, ದೀಪಗಳನ್ನು ಹಚ್ಚಿ ಮತ್ತು ಆತನನ್ನು ಒಂಟಿಯಾಗಿ ಬಿಡಬೇಡಿ. ರಾತ್ರಿ ಮಂಟಪದ ಬಳಿಯೇ ಮಲಗಬೇಕು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸಮಯಕ್ಕೆ ಸರಿಯಾಗಿ ಪೂಜಿಸಬೇಕು. ಸಂಜೆಯೂ ಆರತಿ ಮಾಡಿ.
ಗಣೇಶನನ್ನು ಮೆಚ್ಚಿಸಲು ಮಾಡಿ ಈ ಕೆಲಸ
ಯಾರನ್ನೂ ನೋಯಿಸಬೇಡಿ ಮತ್ತು ಅಸಹಾಯಕ ಜನರ ಸೇವೆ ಮಾಡಿ. ಅಸಹಾಯಕ ಪ್ರಾಣಿಗಳು ಮತ್ತು ಪಕ್ಷಿಗಳು ನರಳಲು ಬಿಡಬಾರದು. ಏಕೆಂದರೆ ಗಣೇಶನಿಗೆ ಪ್ರಾಣಿ ಮತ್ತು ಪಕ್ಷಿಗಳೆಂದರೆ ಬಹಳ ಪ್ರಿಯ. ಅವುಗಳಿಗೆ ಮೇವು ನೀರು ಕೊಡುವ ವ್ಯವಸ್ಥೆ ಮಾಡಿ. ಬಡ ನಿರ್ಗತಿಕರಿಗೆ ದಾನ ಮಾಡಿ. ಯಾರಿಗೂ ನೋವುಂಟು ಮಾಡುವ ಪದಗಳನ್ನು ಬಳಸಬೇಡಿ.
10 ದಿನಗಳ ಕಾಲ ಈ ಚಟುವಟಿಕೆಗಳಿಂದ ದೂರವಿರಿ…
ಗಣಪತಿಯನ್ನು ಆವಾಹನೆ ಮಾಡುವ ಮನೆಯಲ್ಲಿ ಈ 10 ದಿನಗಳಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಹತ್ತು ದಿನಗಳ ಕಾಲ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸಬೇಡಿ. ನಾನ್ ವೆಜ್ ಮತ್ತು ಮದ್ಯ ಇತ್ಯಾದಿ ಚಟಗಳತ್ತ ಕಣ್ಣು ಹಾಯಿಸಬೇಡಿ. ಚತುರ್ಥಿ ದಿನವು ಗಣೇಶನ ದಿನವಾಗಿದೆ, ಈ ದಿನ ಚಂದ್ರ ದರ್ಶನವನ್ನು ನಿಷೇಧಿಸಲಾಗಿದೆ. ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ಸಹ ತಪ್ಪಿಸಿ.