ಪೈಲ್ಸ್ ಸಮಸ್ಯೆಯಿಂದ ಅನೇಕ ಜನರು ಬಳಲುತ್ತಿದ್ದಾರೆ. ಈ ಕಾಯಿಲೆಯ ಪ್ರಸ್ತಾಪ ಬಂದಾಗ ಜನರು ಸಾಮಾನ್ಯವಾಗಿ ಗೊಂದಲಕ್ಕೊಳಗಾಗುತ್ತಾರೆ. ಕೆಲವರು ಮುಜುಗರದ ಕಾರಣಕ್ಕೆ ಈ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ವೈದ್ಯರನ್ನು ಸಂಪರ್ಕಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ವಾಸ್ತವವಾಗಿ ಪೈಲ್ಸ್ ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದೆ. ಇವೆರಡನ್ನೂ ಸರಿಯಾಗಿಟ್ಟುಕೊಂಡರೆ ಪೈಲ್ಸ್‌ನಿಂದ ಮುಕ್ತಿ ಪಡೆಯಬಹುದು. ಪ್ರಮುಖವಾಗಿ ಈ ರೋಗದ ಲಕ್ಷಣಗಳನ್ನು ಅರಿತುಕೊಳ್ಳಬೇಕು. ಅದನ್ನು ನಿಯಂತ್ರಿಸಲು ಕೂಡ ಸುಲಭದ ಮಾರ್ಗಗಳಿವೆ.
ಟೀ-ಕಾಫಿ ಸೇವನೆ ಕಡಿಮೆ ಮಾಡಿ
ಅತಿಯಾದ ಚಹಾ ಅಥವಾ ಕಾಫಿಯನ್ನು ಸೇವಿಸಲು ಪ್ರಾರಂಭಿಸಿದಾಗ ಪೈಲ್ಸ್ ಸಮಸ್ಯೆ ಹೆಚ್ಚಾಗಬಹುದು. ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಇರುತ್ತದೆ. ಇವುಗಳನ್ನು ಅತಿಯಾಗಿ ಸೇವಿಸಿದಾಗ ದೇಹದಲ್ಲಿ ನೀರಿನ ಕೊರತೆ ಮತ್ತು ಕರುಳಿನ ಚಲನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಟೀ, ಕಾಫಿ ಸೇವನೆ ಕಡಿಮೆ ಮಾಡಿ.
ಬೇಕರಿ ಉತ್ಪನ್ನಗಳ ಸೇವನೆ ಅಪಾಯಕಾರಿ
ಬೇಕರಿಯಲ್ಲಿ ಮಾಡಿದ ಕೇಕ್, ಪೇಸ್ಟ್ರಿ, ಬ್ರೆಡ್‌ನಂತಹ ಆಹಾರಗಳು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ ಮತ್ತು ದೇಹದ ಚಯಾಪಚಯ ಕ್ರಿಯೆಗೂ ಅಡ್ಡಿ ಮಾಡುತ್ತವೆ. ದಿನನಿತ್ಯ ಈ ಪದಾರ್ಥಗಳನ್ನು ಸೇವಿಸಿದರೆ ಪೈಲ್ಸ್ ಕಾಯಿಲೆ ನಿಯಂತ್ರಣಕ್ಕೆ ಬರುವುದು ಕಷ್ಟವಾಗುತ್ತದೆ.
ಈ ತರಕಾರಿಗಳನ್ನು ಸೇವಿಸಬೇಡಿ
ಗ್ಯಾಸ್, ಆಸಿಡಿಟಿ, ಅಜೀರ್ಣಕ್ಕೆ ಕಾರಣವಾಗುವ ತರಕಾರಿಗಳನ್ನು ಸೇವಿಸಬಾರದು. ಕ್ಯಾಪ್ಸಿಕಂ, ಹೂಕೋಸು, ಆಲೂಗಡ್ಡೆ, ಎಲೆಕೋಸು ಮುಂತಾದ ತರಕಾರಿಗಳನ್ನು ಸೇವಿಸದೇ ಇರುವುದು ಉತ್ತಮ. ಈ ತರಕಾರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ.
ಕರಿದ ಪದಾರ್ಥ ತಿನ್ನಬೇಡಿ
ಮಸಾಲೆಯುಕ್ತ ಮತ್ತು ಕರಿದ ಆಹಾರವು ಯಾವಾಗಲೂ ಹಾನಿಕಾರಕ. ಇವುಗಳ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಜೊತೆಗೆ ಅವನ್ನೆಲ್ಲ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಮಲಬದ್ಧತೆಯ ಸಮಸ್ಯೆ ಶುರುವಾಗುತ್ತದೆ, ನಂತರ ಅದು ಪೈಲ್ಸ್ ರೂಪ ಪಡೆದುಕೊಳ್ಳುತ್ತದೆ. ಪೈಲ್ಸ್‌ನಿಂದ ದೂರವಿರಲು ಬಯಸಿದರೆ ಕರಿದ ಪದಾರ್ಥ ಸೇವಿಸಬೇಡಿ.