ಈ ಸ್ಟೋರಿ ಸಿನಿಮಾವನ್ನೇ ಹೋಲುವಂತಿದೆ. ತನ್ನ ಸಹೋದರ ಹಾಗೂ ಸ್ನೇಹಿತನನ್ನು ಕೊಂದವರಿಗೆ ಕಾನೂನು ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆ ಕೊಡಿಸುವ ಸಲುವಾಗಿ ಯುವಕನೊಬ್ಬ ತನ್ನ ಜೀವನವನ್ನೇ ಮುಡುಪಾಗಿಟ್ಟು ಇದರಲ್ಲಿ ಯಶಸ್ವಿಯೂ ಆಗಿದ್ದಾನೆ.
ಹೌದು, ಇಂಥದೊಂದು ಘಟನೆ ಮುಂಬೈನಲ್ಲಿ ನಡೆದಿದ್ದು, ಶೇನ್ ಸ್ಯಾಂಟೋಸ್ ಎಂಬಾತ ಕಾನೂನು ವ್ಯಾಸಂಗ ಮಾಡಿ ತನ್ನ ಸಹೋದರ ಮತ್ತು ಗೆಳೆಯನ ಕೊಲೆ ಪ್ರಕರಣವನ್ನು ತಾನೇ ನ್ಯಾಯಾಲಯದಲ್ಲಿ ವಾದ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು ಸಫಲನಾಗಿದ್ದಾನೆ.
2011ರಲ್ಲಿ ಮುಂಬೈನ ಅಂಧೇರಿಯ ಅಂಬೋಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕೀನನ್ ಮತ್ತು ರುಬೆನ್ ಎಂಬ ಯುವಕರು ಪಾರ್ಟಿ ಮಾಡುವಾಗ ನಡೆದ ಜಗಳದಲ್ಲಿ, ಇಬ್ಬರನ್ನೂ ಕೊಲೆ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಕೀನೆನ್ ಸಹೋದರ ಶೇನ್ ಸ್ಯಾಂಟೋಸ್ 19 ವರ್ಷ ಪ್ರಾಯದವನಾಗಿದ್ದು, ತನ್ನ ಸಹೋದರ ಹಾಗೂ ಗೆಳೆಯನನ್ನು ಕೊಂದ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡುವ ಸಲುವಾಗಿ ಕಾನೂನು ವ್ಯಾಸಂಗ ಮಾಡಿ 2020ರಲ್ಲಿ ಪದವಿ ಪಡೆದಿದ್ದ.
ಹೀಗೆ 12 ವರ್ಷಗಳ ತನ್ನ ತಪಸ್ಸಿನ ಫಲವಾಗಿ ನ್ಯಾಯವಾದಿಯಾದ ಈತ ಕೊಲೆ ಪ್ರಕರಣವನ್ನು ಮುಂಬೈ ನ್ಯಾಯಾಲಯದಲ್ಲಿ ಪ್ರಬಲವಾಗಿ ಮಂಡಿಸಿ ಆರೋಪಿಗಳಾಗಿದ್ದ ಜಿತೇಂದ್ರ ರಾಣಾ ಮತ್ತು ಆತನ ಮೂವರು ಗೆಳೆಯರಿಗೆ ಜೀವಾವಧಿ ಶಿಕ್ಷೆ ಕೊಡಿಸಲು ಯಶಸ್ವಿಯಾಗಿದ್ದಾನೆ.