
ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಈ ಬಾರಿ ಏಕಕಾಲದಲ್ಲಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದ್ದಾರೆ.
ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಮೊದಲ ಸುತ್ತಿನ ಸೀಟು ಹಂಚಿಕೆ ಆದ್ಯತೆಗಳನ್ನು ದಾಖಲಿಸಲು ಇಂಜಿನಿಯರಿಂಗ್, ಪಶು ವೈದ್ಯಕೀಯ ಮೊದಲಾದ ಕೋರ್ಸುಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಫಲಿತಾಂಶ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಸೇರಿ ಇತರೆ ವೈದ್ಯಕೀಯ ಕೋರ್ಸ್ ಗಳ ಆದ್ಯತೆಗೆ ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು, ಪೋಷಕರು ಗಾಬರಿಯಾಗುವ ಅಗತ್ಯವಿಲ್ಲ, ನೀಟ್ ಮಾಹಿತಿ ಬರುವುದು ತಡವಾಗುತ್ತಿರುವ ಕಾರಣ ಇಂಜಿನಿಯರಿಂಗ್ ಸೇರಿ ಇತರೆ ಕೋರ್ಸ್ ಗಳ ಪ್ರವೇಶ ಸಂಬಂಧ ಆದ್ಯತೆ ದಾಖಲಿಸಲು ಮೊದಲು ಅವಕಾಶ ಕಲ್ಪಿಸಲಾಗಿದೆ. ನಂತರ ಅಣಕು ಸೀಟು ಹಂಚಿಕೆ, ಬಳಿಕ ನೈಜ ಸೀಟು ಹಂಚಿಕೆ ಏಕಕಾಲದಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಪ್ರತಿ ದಿನ ಕನಿಷ್ಠ ಎರಡು ಬಾರಿ ಕೆಇಎ ವೆಬ್ಸೈಟ್ ಗೆ ಭೇಟಿ ಕೊಡಬೇಕು. ಈ ಮೂಲಕ ಕಾಲಕಾಲಕ್ಕೆ ಹೊರಡಿಸಲಾದ ಪ್ರಕಟಣೆಗಳನ್ನು ಗಮನಿಸಬೇಕು ಎಂದು ತಿಳಿಸಲಾಗಿದೆ.