ಬೆಂಗಳೂರು: ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಯುಜಿ ಸಿಐಟಿ ಎರಡನೇ ಮುಂದುವರೆದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದ್ದು, ಶನಿವಾರದಿಂದಲೇ ಆದ್ಯತಾ ಕ್ರಮದಲ್ಲಿ ಆಪ್ಷನ್ ಗಳನ್ನು ದಾಖಲಿಸಲು ವೆಬ್ಸೈಟ್ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ.
ಮೊದಲ ಎರಡು ಸುತ್ತುಗಳಲ್ಲಿ ಆಪ್ಷನ್ ಗಳನ್ನು ದಾಖಲು ಮಾಡದವರು ಮತ್ತು ಹಂಚಿಕೆಯಾದ ಸೀಟಿಗೆ ಯಾವುದೇ ಚಾಯ್ಸ್ ನೀಡದವರು ಹಾಗೂ ಇದುವರೆಗೆ ಸೀಟು ಹಂಚಿಕೆಯಾಗದವರಿಗೂ ಆಪ್ಷನ್ ದಾಖಲಿಸಲು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 4ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡನೇ ಮುಂದುವರೆದ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶವನ್ನು ಅಕ್ಟೋಬರ್ 7ರಂದು ಮತ್ತು ಅಂತಿಮ ಫಲಿತಾಂಶವನ್ನು ಅಕ್ಟೋಬರ್ 8ರಂದು ಪ್ರಕಟಿಸಲಾಗುವುದು. ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅಕ್ಟೋಬರ್ 9ರಿಂದ 14ರವರೆಗೆ ಅವಕಾಶವಿದ್ದು, ಅಕ್ಟೋಬರ್ 15 ಕಾಲೇಜಿಗೆ ಪ್ರವೇಶ ಪಡೆಯಲು ಅಂತಿಮ ದಿನವಾಗಿದೆ.
ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಂಕಗಳ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೇರವಾಗಿ ಪಡೆದು ಅದರ ಮೇಲೆ ಸಿಇಟಿ ರ್ಯಾಂಕ್ ನೀಡಲಾಗಿದೆ. 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆಪ್ಟೆಂಬರ್ 30ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ ರ್ಯಂಕ್ ಪಡೆದು ಆಪ್ಷನ್ ದಾಖಲಿಸಬಹುದು. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು ರದ್ದುಪಡಿಸಿಕೊಳ್ಳಲು ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಅಂತವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಎನ್ನಲಾಗಿದೆ.