
ಬೆಂಗಳೂರು: ಯಾವುದೇ ಮುನ್ಸೂಚನೆ ನೀಡದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಫಲಿತಾಂಶವನ್ನು ಶನಿವಾರ ಸಂಜೆ ಏಕಾಏಕಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳಿಗೆ ಫಲಿತಾಂಶದ ಕುರಿತಾಗಿ ಯಾವುದೇ ಮುನ್ಸೂಚನೆ ನೀಡದೆ ಫಲಿತಾಂಶ ಪ್ರಕಟಿಸಲಾಗಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯವೈಖರಿ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.
ಸಿಇಟಿ ಫಲಿತಾಂಶ ಪ್ರಕಟಿಸಲು ನಮಗೆ ಸಾಕಷ್ಟು ಒತ್ತಡವಿತ್ತು. ಹೀಗಾಗಿ ನಿನ್ನೆ ಸಿಇಟಿ ಫಲಿತಾಂಶ ಪ್ರಕಟಿಸಲಾಗಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಸುದ್ದಿಗೋಷ್ಠಿ ಕರೆಯದೆ ಪತ್ರಿಕಾ ಪ್ರಕಟಣೆಯ ಮೂಲಕ ಸಿಇಟಿ ಫಲಿತಾಂಶ ಪ್ರಕಟಿಸಲಾಗಿತ್ತು. ಫಲಿತಾಂಶ ಪ್ರಕಟಿಸಿದ ಬಳಿಕ ನಮಗೆ ಅರಿವಾಗಿದೆ. ಸಾಕಷ್ಟು ಗೊಂದಲವೂ ಆಯಿತು. ಇನ್ನು ಮುಂದೆ ಸರಿಯಾಗಿ ನಿಯಮಗಳನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.