ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ನಿಯಮ ಜಾರಿಗೆ ತರುವ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಕಾಂಕ್ಷಿಗಳ ಕನಸಿಗೆ ತಣ್ಣೀರೆರಚಿದೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಇಲ್ಲದ ನಿಯಮವನ್ನು ಈಗ ಸೇರ್ಪಡೆ ಮಾಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಂದೇ ವಿಷಯವನ್ನು ಓದಿದವರು ಮಾತ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಹೊಸ ನಿಯಮ ಸೇರ್ಪಡೆ ಮಾಡಿರುವುದು ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಲ್ಲಿ ಆತಂಕ ತಂದಿಟ್ಟಿದೆ.
ಅರ್ಜಿ ಸಲ್ಲಿಕೆಗೆ ಎರಡು ದಿನ ಬಾಕಿ ಉಳಿದ ಸಂದರ್ಭದಲ್ಲಿ ಇಂತಹ ನಿಯಮವನ್ನು ಪ್ರಕಟಿಸಿರುವುದು ಹುದ್ದೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಾಕ್ ನೀಡಿದೆ. ಈ ನಿಯಮದ ಬಗ್ಗೆ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ತಮಗೆ ಬೇಕಾದ ವಿಷಯದಲ್ಲಿ ಓದಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ನೇಮಕಾತಿಗೆ ಮಾತ್ರ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಂದೇ ವಿಷಯ ಇರಬೇಕೆಂಬ ನಿಯಮ ತಂದಿರುವುದು ಸರಿಯಲ್ಲ. ಈಗಾಗಲೇ ಸಾಮಾನ್ಯ ವರ್ಗದವರು 2000 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 1000 ರೂ. ಪಾವತಿಸಿದ್ದಾರೆ. ಕೊನೆ ದಿನಾಂಕಕ್ಕೆ ಎರಡು ದಿನ ಇರುವಾಗ ಇಂತಹ ನಿಯಮ ಸೇರ್ಪಡೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಅಕ್ಟೋಬರ್ 7 ರಂದು ಅಧಿಸೂಚನೆ ಹೊರಡಿಸಿ ನವೆಂಬರ್ 6 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದ್ದು, ಕೆ -ಸೆಟ್ ಫಲಿತಾಂಶ ಬಂದ ಕಾರಣ ನವೆಂಬರ್ 20ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿತ್ತು. ನವೆಂಬರ್ 18 ರಂದು ಹೊಸ ನಿಯಮ ಜಾರಿಗೊಳಿಸಿ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಯಿತು. ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿತ್ತು ಎನ್ನಲಾಗಿದೆ.