ಬೆಂಗಳೂರು: ವಿವಿಧ ಇಲಾಖೆ ನಿಗಮಗಳ ಒಟ್ಟು 747 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಿಕೊಡುವಂತೆ ಕೋರಿಕೆ ಸಲ್ಲಿಸಲಾಗಿದೆ. ಸರ್ಕಾರದ ಒಪ್ಪಿಗೆ ದೊರೆತ ನಂತರ ಲಿಖಿತ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದ್ದಾರೆ.
ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಗೆ ಮನವಿ ಬಂದಿದೆ.
ಒಳ ಮೀಸಲಾತಿ ಸಂಬಂಧ ತೀರ್ಮಾನವಾಗುವವರೆಗೂ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರ ಅನುಮತಿ ನೀಡಿದ ನಂತರ ಆದಷ್ಟು ಬೇಗನೆ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.