ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಈವರೆಗೆ ಅರ್ಜಿ ಸಲ್ಲಿಸದ ಮತ್ತು ಯುಜಿ ನೀಟ್ -24ರಲ್ಲಿ ಅರ್ಹತೆ ಪಡೆದುಕೊಂಡವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೆಬ್ಸೈಟ್ ನಲ್ಲಿ ಬುಧವಾರ ಲಿಂಕ್ ಬಿಡುಗಡೆ ಮಾಡಿದೆ.
ರಾಜ್ಯದ ಹಾಗೂ ಹೊರ ರಾಜ್ಯದ ಅರ್ಹ ಅಭ್ಯರ್ಥಿಗಳು ಮಾತ್ರ ಆಗಸ್ಟ್ 9ರೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಬಂದವರಿಗೆ ಅವಕಾಶ ಇರುವುದಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಪೋರ್ಟಲ್ ನಲ್ಲಿ ಯುಜಿ ನೀಟ್ -24ಕ್ಕೆ ಹೊಸದಾಗಿ ನೋಂದಣಿ ಮಾಡುವ ಲಿಂಕ್ ಆಯ್ಕೆ ಮಾಡಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಎಲ್ಲಾ ಖಾಸಗಿ, ಎನ್.ಆರ್.ಐ., ಆಡಳಿತ ಮಂಡಳಿ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲವೇ ಹಂಚಿಕೆ ಮಾಡಲಾಗುತ್ತದೆ. ಕೊನೆ ಹಂತದಲ್ಲಿ ಬಾಕಿ ಉಳಿಯುವ ಸೀಟುಗಳನ್ನು ಕೂಡ ಪ್ರಾಧಿಕಾರದ ಮೂಲಕವೇ ಹಂಚಿಕೆ ಮಾಡಲಿದ್ದು, ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ಮಂಡಳಿಯಿಂದ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ.