ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕೆಇಎ ಹೊಸ ಯೋಜನೆ ರೂಪಿಸಿದ್ದು, ವೆಬ್ ಕಾಸ್ಟಿಂಗ್ ಅಳವಡಿಸಲು ಮುಂದಾಗಿದೆ.
ಕೆಇಎ ನಡೆಸುವ ಪ್ರತಿ ಪರೀಕ್ಷೆಗಳಲ್ಲಿಯೂ ವೆಬ್ ಕಾಸ್ಟಿಂಗ್ ಹಾಗೂ ಎಇ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲು ಮುಂದಾದ ವೇಳೆ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಕೆಇಎ ವೆಬ್ ಕಾಸ್ಟಿಂಗ್ ನ್ನು ಪ್ರತಿ ಪರೀಕ್ಷೆಯಲ್ಲಿಯೂ ಅಳವಡಿಸಲು ತೀರ್ಮಾನಿಸಿದೆ.
ಇದರ ಮೊದಲ ಹಂತವಾಗಿ ನಿಇನ್ನೆ ನಡೆದಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಅಳವಡಿಸಲಾಗಿತ್ತು. ಕಲಬುರ್ಗಿ, ಬೆಂಗಳೂರು, ಧಾರವಾಡ, ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ 377 ಕೊಠಡಿಗಳಲ್ಲಿ ಕ್ಯಾಮರಾ ಅಳವಡಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿದೆ.
ವೆಬ್ ಕಾಸ್ಟಿಂಗ್ ನಿಂದಾಗಿ ನೇರವಾಗಿ ಪರೀಕ್ಷಾ ಕೊಠಡಿಯಿಂದ ಲೈವ್ ದೃಶ್ಯವನ್ನು ಕಮಾಂಡ್ ರೂಂ ನಲ್ಲಿ ವೀಕ್ಷಿಸಬಹುದು. ಇದರಿಂದ ಶಿಕ್ಷಕರು, ಅಭ್ಯರ್ಥಿಗಳ ಚಲನವಲನಗಳನ್ನು ಒಮ್ಮೆಲೆ ವೀಕ್ಷಿಸಬಹುದು. ಎಐ ತಂತ್ರಜ್ಞಾನ ಹಾಗೂ ಫೇಸ್ ರೆಕಗ್ನೈಸೇಷನ್ ಕೂಡ ಅಳವಡಿಸಲಾಗಿದ್ದು ಇದರಿಂದ ಅಭ್ಯರ್ಥಿಗಳ ಮುಖ ಹಾಗೂ ಫೋಟೋ ಸ್ಕ್ಯಾನ್ ಆಗುವುದರಿಂದ ಅಭ್ಯರ್ಥಿಯ ನಿಖರ ಮಾಹಿತಿ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿಯೂ ವೆಬ್ ಕಾಸ್ಟಿಂಗ್ ಅಳವಡಿಕೆ ನಿರ್ಧರಿಸಲಾಗಿದೆ.