
ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಫೆಬ್ರವರಿ 24ರ ವರೆಗೆ ವಿಸ್ತರಿಸಿದೆ.
ಈ ಮೊದಲು ಫೆಬ್ರವರಿ 18ರವರೆಗೆ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಫೆಬ್ರವರಿ 24ರ ವರೆಗೆ ವಿಸ್ತರಿಸಲಾಗಿದೆ. ಫೆಬ್ರವರಿ 25 ಶುಲ್ಕ ಪಾವತಿಗೆ ಕೊನೆ ದಿನವಾಗಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆ ತೆಗೆದುಕೊಂಡರೂ ರಾಜ್ಯದಲ್ಲಿನ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಕೆಇಎ ನಡೆಸುವ ಸಿಇಟಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿದವರು ಅರ್ಜಿಗಳಲ್ಲಿನ ಮಾಹಿತಿ ಬದಲಿಸಬಹುದು. ದಾಖಲೆಗಳ ಪರಿಶೀಲನೆ ಕಾಲೇಜು ಹಂತದಲ್ಲೇ ನಡೆಯಲಿದೆ. ಕ್ಲೇಮುಗಳ ಪ್ರಕಾರ ಅಗತ್ಯ ದಾಖಲೆ ಹೊಂದಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.
