alex Certify ರೈತರು, ಮನೆ ನಿರ್ಮಿಸುವವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು, ಮನೆ ನಿರ್ಮಿಸುವವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಶಿವಮೊಗ್ಗ: ಈ ಹಣಕಾಸು ಸಾಲಿನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳು ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

ಶಿಕಾರಿಪುರದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಹನಿ ನೀರಾವರಿ ಸೌಲಭ್ಯಕ್ಕಾಗಿ ಬಾಕಿ ಇರುವ ಅರ್ಜಿಗಳ ಮಾಹಿತಿ ಒದಗಿಸಿ. ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹನಿ ನೀರಾವರಿ ಅಳವಡಿಸಿರುವ ರೈತರಿಗೆ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿಯಮಾನುಸಾರ ಮರಳು ಮತ್ತು ಜಲ್ಲಿ ಸಾಗಾಟಕ್ಕೆ ಅಡ್ಡಿ ಉಂಟು ಮಾಡಬಾರದು. ಯಾವುದೇ ಕಾರಣಕ್ಕೂ ಮರಳು ಮತ್ತು ಜಲ್ಲಿ ಪೂರೈಕೆಗೆ ತೊಂದರೆಯಾಗಬಾರದು. ಕಾನೂನು ಬಾಹಿರವಾಗಿ ನಡೆಯುತ್ತಿರುವ ಚಟುವಟಿಕೆಗಳನ್ನು ಮಾತ್ರ ತಡೆಯಿರಿ ಎಂದು ಸೂಚಿಸಿದ್ದು, ಪರವಾನಿಗೆ ಪಡೆದು ನಡೆಯುತ್ತಿರುವ ಕಲ್ಲುಗಣಿ, ಕ್ರಷರ್ ಕಾರ್ಯ ನಿಲ್ಲಬಾರದು. ಅನುಮತಿಗಾಗಿ ಬಾಕಿ ಇರುವ ನಿರಪೇಕ್ಷಣಾ ಪತ್ರಗಳನ್ನು ತಕ್ಷಣ ನೀಡಬೇಕು ಎಂದು ತಿಳಿಸಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ಎರಡು ಪಶು ವೈದ್ಯ ಆಸ್ಪತ್ರೆ ಆರಂಭಿಸಲು ಅನುಮೋದನೆ ನೀಡಲಾಗುವುದು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ಆದ್ದರಿಂದ ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳಬಾರದು. ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಆಗಿದ್ದರೂ, ನೀರು ಖಾಲಿಯಾದರೆ ಮಾತ್ರ ಕಾಮಗಾರಿ ಆರಂಭಿಸಿ. ಅನುದಾನ ದುರುಪಯೋಗಕ್ಕೆ ಯಾವುದೇ ಇಲಾಖೆಗಳು ಆಸ್ಪದ ನೀಡಬಾರದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನ ಜಾಗ ಗುರುತಿಸಬೇಕು. ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನೀರು ಪೂರೈಕೆ ಮಾಡುವ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಯೋಜನೆಯಡಿ ಪ್ರತಿ ಫಲಾನುಭವಿ ಮನೆಯವರು ನೀಡಬೇಕಾಗಿರುವ ಶೇ.10 ರಷ್ಟು ಹಣವನ್ನು ಸರ್ಕಾರದಿದ ನೇರವಾಗಿ ಪಾವತಿಸುವ ಕುರಿತು ಈ ಬಾರಿಯ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಲೋಕಸಬಾ ಸದಸ್ಯ ಬಿ.ವೈ. ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ತಾ.ಪಂ ಅಧ್ಯಕ್ಷ ಸುರೇಶ್ ನಾಯ್ಕ್, ಜಿಲ್ಲಾಧಿಕಾರಿ ಶಿವಕುಮಾರ್, ಸಿಇಒ ವೈಶಾಲಿ, ಎಸ್ಪಿ ಶಾಂತರಾಜು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...