ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಖಶಾಬಾ ದಾದಾಸಾಹೇಬ್ ಜಾಧವ್. 1952 ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಜಾಧವ್ ಭಾರತಕ್ಕೆ ಹೆಮ್ಮೆ ತಂದರು. ಇದಕ್ಕೂ ಮುನ್ನ ಭಾರತಕ್ಕೆ ವೈಯಕ್ತಿಕ ಸ್ಪರ್ಧೆಯಲ್ಲಿ ಯಾವುದೇ ಪ್ರಶಸ್ತಿ ಬಂದಿರಲಿಲ್ಲ. ಕುಳ್ಳಗಿರುವ ಜಾಧವ್ ಅವರನ್ನು ಪಾಕೆಟ್ ಡೈನಮೋ ಎಂದು ಕರೆಯಲಾಗುತ್ತದೆ.
ಕೆ.ಡಿ. ಜಾಧವ್ 1926 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ದಾದಾಸಾಹೇಬ್ ಕೂಡ ಕುಸ್ತಿಪಟು. ಜಾಧವ್ ತುಂಬಾ ದುರ್ಬಲವಾಗಿ ಕಾಣುತ್ತಿದ್ದರು. ಈ ಕಾರಣಕ್ಕಾಗಿ ರಾಜಾರಾಮ್ ಕಾಲೇಜಿನ ಕ್ರೀಡಾ ಶಿಕ್ಷಕ ಅವರನ್ನು ವಾರ್ಷಿಕ ಕ್ರೀಡಾ ತಂಡದಲ್ಲಿ ಸೇರಿಸಲು ನಿರಾಕರಿಸಿದ್ದರು. ನಂತರ ಕಾಲೇಜಿನ ಪ್ರಾಂಶುಪಾಲರು ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರು.
1948 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕೆ.ಡಿ. ಜಾಧವ್ ಆರನೇ ಸ್ಥಾನ ಪಡೆದಿದ್ದರು. ಆದರೆ ಆಟದಿಂದ ಸಾಕಷ್ಟು ಚರ್ಚೆಗೆ ಬಂದಿದ್ದರು. ಲಂಡನ್‌ನಿಂದ ವಾಪಸ್ ಆದ ನಂತರ ಜಾಧವ್ ಹೆಲ್ಸಿಂಕಿ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ್ದರು. ಆದರೆ ಹೆಲ್ಸಿಂಕಿಗೆ ಹೋಗಲು ಅವರ ಬಳಿ ಹಣವಿರಲಿಲ್ಲ. ರಾಜಾರಾಮ್ ಕಾಲೇಜಿನ ಮಾಜಿ ಪ್ರಾಂಶುಪಾಲರು 7000 ರೂಪಾಯಿ, ರಾಜ್ಯ ಸರ್ಕಾರ 4000 ರೂಪಾಯಿಗಳನ್ನು ನೀಡಿತ್ತು. ಆದ್ರೆ ಇದು ಸಾಲುತ್ತಿರಲಿಲ್ಲ. ನಂತರ ಜಾಧವ್ ಮನೆಯನ್ನು ಅಡವಿಟ್ಟು ಹೆಲ್ಸಿಂಕಿಗೆ ಹೋಗಿದ್ದರು.
ಕೆನಡಾ, ಮೆಕ್ಸಿಕೊ ಮತ್ತು ಜರ್ಮನಿಯ ಕುಸ್ತಿಪಟುಗಳನ್ನು ಸೋಲಿಸಿದ ಜಾಧವ್, ಸೋವಿಯತ್ ಕುಸ್ತಿಪಟು ರಶೀದ್ ಮಮ್ಮದ್ಬಯೋವ್ ವಿರುದ್ಧ ಸೋತರು. ಪಂದ್ಯಗಳ ನಡುವೆ ವಿಶ್ರಾಂತಿ ಸಿಗದ ಕಾರಣ ಜಾಧವ್ ಸುಸ್ತಾಗಿದ್ದರು. ಕೆ.ಡಿ. ಜಾಧವ್ ಕಂಚಿನ ಪದಕದೊಂದಿಗೆ ಹಿಂದಿರುಗಿದಾಗ ಅವರನ್ನು ನೋಡಲು ಸಾವಿರಾರು ಪ್ರೇಕ್ಷಕರು ನೆರೆದಿದ್ದರು. 100 ಎತ್ತಿನ ಬಂಡಿಗಳೊಂದಿಗೆ ಸ್ವಾಗತಿಸಲಾಯಿತು. ನಿಲ್ದಾಣದಿಂದ ಮನೆ ತಲುಪಲು ಅವರಿಗೆ 7 ಗಂಟೆ ಬೇಕಾಯಿತು.