ಹೈದರಾಬಾದ್: ಬಿ.ಆರ್.ಎಸ್. ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ನೇತೃತ್ವದ ಬಿ.ಆರ್.ಎಸ್. ಪಕ್ಷ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಬಡ ಕುಟುಂಬದ ಮಹಿಳೆಯರಿಗೆ ತಿಂಗಳಿಗೆ 3000 ರೂ. ಆರ್ಥಿಕ ನೆರವು ಘೋಷಣೆ ಮಾಡಲಾಗಿದೆ. 400 ರೂಪಾಯಿಗೆ ಅರ್ಹ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಒದಗಿಸಲಾಗುವುದು. ಕೆಸಿಆರ್ ಆರೋಗ್ಯ ರಕ್ಷಾ ಯೋಜನೆಯ ಅರ್ಹರಿಗೆ 15 ಲಕ್ಷ ರೂಪಾಯಿ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಹೇಳಲಾಗಿದೆ. 93 ಲಕ್ಷ ಬಿಪಿಎಲ್ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಉಚಿತ ವಿಮಾ ಯೋಜನೆ ಸೇರಿದಂತೆ ಹಲವು ಭರವಸೆ ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಬಡವರು ಹಾಗೂ ಮಧ್ಯಮ ವರ್ಗದ ಮತದಾರರನ್ನು ಸೆಳೆಯಲು ಬಿ.ಆರ್.ಎಸ್. ಮುಂದಾಗಿದೆ. 119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆ ಚುನಾವಣೆಗೆ 115 ಅಭ್ಯರ್ಥಿಗಳ ಪಟ್ಟಿಯನ್ನು ಆಗಸ್ಟ್ ನಲ್ಲಿಯೇ ಬಿ.ಆರ್.ಎಸ್. ಬಿಡುಗಡೆ ಮಾಡಿದೆ.