ಚಿತ್ರದುರ್ಗ: ಕಳಪೆ ಗುಣಮಟ್ಟದ ಆಹಾರ ನೀಡಿದಲ್ಲಿ ವಾರ್ಡನ್ ಗೆ ಕೊಠಡಿಯಲ್ಲಿ ಕೂಡಿ ಹಾಕಿ ಬಾರಿಸಿ. ನಾನೂ ಇರುತ್ತೇನೆ, ಯೋಚನೆ ಮಾಡಬೇಡಿ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳಿಗೆ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಸಮಾಜ ಕಲ್ಯಾಣ ಇಲಾಖೆಯ ಕಾನೂನು ಮತ್ತು ಬಿಎಡ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಭೇಟಿ ನೀಡಿದ ಅವರು ವಾರ್ಡನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಇಂತಹ ವಿವಾದಿತ ಹೇಳಿಕೆ ನೀಡಿದ್ದಾರೆ.
ಊಟದಲ್ಲಿ ಕಸ, ಕಡ್ಡಿ, ಕಂಬಳಿ ಹುಳ, ಕುರಿ ಹಿಕ್ಕೆ ಹೀಗೆ ಏನೇನೋ ಸಿಗುತ್ತಿದ್ದು, ಹಲವು ಬಾರಿ ವಾರ್ಡನ್ ಗೆ ದೂರು ನೀಡಿದ್ದರೂ ಸರಿಪಡಿಸಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಎಲ್.ಎಲ್.ಬಿ. ಮತ್ತು ಬಿಎಡ್ ಹಾಸ್ಟೆಲ್ ವಿದ್ಯಾರ್ಥಿಗಳು ಜುಲೈ 3ರಂದು ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಕೊಳೆತ ತರಕಾರಿ ಬಳಸಿ ಅಡುಗೆ ಮಾಡುತ್ತಿದ್ದು, ಅದರಲ್ಲಿ ಹುಳಗಳಿರುತ್ತವೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದು, ಅಂದು ಹಾಸ್ಟೆಲ್ ಗೆ ಭೇಟಿ ನೀಡಿದ್ದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಇನ್ನೊಮ್ಮೆ ಊಟದಲ್ಲಿ ಹುಳ, ಕಸ ಸಿಕ್ಕರೆ ಅವುಗಳನ್ನು ತಟ್ಟೆಗೆ ಹಾಕಿಕೊಂಡು ವಾರ್ಡನ್ ಗೆ ತಿನ್ನಿಸಿ, ಕೊಠಡಿಯಲ್ಲಿ ಕೂಡಿಹಾಕಿ ಸರಿಯಾಗಿ ಬಾರಿಸಿ ಎಂದು ಹೇಳಿದ್ದಾರೆ.
ಶಾಸಕರ ಹೇಳಿಕೆ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕಳಪೆ ಗುಣಮಟ್ಟದ ಆಹಾರ ನೀಡಿದ್ದರಿಂದ ನೋವಿನಿಂದ ಹಾಗೆ ಮಾತನಾಡಿದ್ದೆ. ಕಾನೂನು ಕೈಗೆತ್ತಿಕೊಳ್ಳಬಾರದು ಮತ್ತು ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಬುದ್ಧಿವಾದ ಕೂಡ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.