ಸತತ 20 ವರ್ಷದಿಂದ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಭಾರತೀಯರ ಅತಿ ಮೆಚ್ಚಿನ ಕಾರ್ಯಕ್ರಮ. ಬಾಲಿವುಡ್ ಬಿಗ್ ಬಿ ನಡೆಸಿಕೊಡುವ ಈ ಕಾರ್ಯಕ್ರಮ ಜ್ಞಾನಕ್ಕೆ ಸವಾಲು ಹಾಕುವುದಷ್ಟೇ ಅಲ್ಲದೇ, ಅದೆಷ್ಟೋ ಜನರ ಬದುಕಿನ ಕಥೆಗಳನ್ನ ತೆರೆದಿಡುತ್ತೆ. ಕೋಟಿ ಗೆಲ್ಲಬೇಕೆಂಬ ಆಸೆಯಿಂದ ಇದುವರೆಗೆ ಅನೇಕರು ಕಾರ್ಯಕ್ರಮದ ಹಾಟ್ ಸೀಟ್ ನಲ್ಲಿ ಕುಳಿತಿದ್ದಾರೆ. ಹೆಚ್ಚು ಹಣ ಗಳಿಸಲು ಕಾರ್ಯಕ್ರಮದ ಕೊನೇ ಕ್ಷಣದವರೆಗೂ ಹೋರಾಡ್ತಾರೆ. ಸ್ಪರ್ಧಿಗಳು ಕೊಡುವ ಉತ್ತರವೇ ಇಲ್ಲಿ ಅವರ ಹೋರಾಟವಾಗಿರುತ್ತೆ. ಆದರೆ ಇದೇ ಮೊದಲ ಬಾರಿಗೆ ಈ ಹೋರಾಟದಲ್ಲಿ ಸ್ಪರ್ಧಿಯೊಬ್ಬರು ಇತರರಿಗಾಗಿ ಆಟವನ್ನು ಅರ್ಧದಲ್ಲೇ ಬಿಟ್ಟುಕೊಟ್ಟಿದ್ದಾರೆ. ಸಹ ಸ್ಪರ್ಧಿಗಳಿಗಾಗಿ ಆಟ ಬಿಟ್ಟುಕೊಟ್ಟ ಅವರ ನಡೆಗೆ ಅಮಿತಾಬ್ ಬಚ್ಚನ್ ಮನಸೋತಿದ್ದಾರೆ. ಕಾರ್ಯಕ್ರಮದಲ್ಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ನೀಡಿದ ಪ್ರಸಂಗ ನಡೆದಿದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾದ ಆ ಸ್ಪರ್ಧಿಯೇ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಡಾ ನೀರಜ್ ಸಕ್ಸೇನಾ.
ಅಕ್ಟೋಬರ್ 17 ರ ಸಂಚಿಕೆಯಲ್ಲಿ ಕೋಲ್ಕತ್ತಾದ JSI ವಿಶ್ವವಿದ್ಯಾಲಯದಲ್ಲಿ PRO ಚಾನ್ಸೆಲರ್ ಆಗಿ ಕೆಲಸ ಮಾಡುವ ಡಾ. ನೀರಜ್ ಸಕ್ಸೇನಾ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಉತ್ತರಿಸಿದ ನಂತರ ಹಾಟ್ ಸೀಟ್ ನಲ್ಲಿ ಕೂತರು. ಪಿಎಚ್‌ಡಿ ಮುಗಿಸಿದ ನಂತರ ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ ಎಂದು ಸಕ್ಸೇನಾ ಬಿಗ್‌ಬಿಗೆ ತಿಳಿಸಿದರು. ಡಾ ಕಲಾಂ ಅವರೊಂದಿಗಿನ ಅವರ ಕೆಲವು ಫೋಟೋಗಳನ್ನು ಸಹ ಪರದೆಯ ಮೇಲೆ ತೋರಿಸಲಾಯಿತು. ಡಾ ನೀರಜ್ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ತಮ್ಮ ‘ಮೊದಲ ಬಾಸ್’ ಎಂದು ಕರೆದರು.
ನೀರಜ್ ಸಕ್ಸೇನಾ 3, 20, 000 ರೂ. ಗಳಿಸುವ ಪ್ರಶ್ನೆವರೆಗೆ ತೆರಳಿದರು. ಇದರ ಜೊತೆಗೆ 3,20,000 ರೂ. ಬೋನಸ್ ಮೊತ್ತವನ್ನೂ ಗೆದ್ದರು. ಆಶ್ಚರ್ಯಕರವಾಗಿ ಈ ಸಮಯದಲ್ಲಿ ಡಾ ನೀರಜ್ ಸಕ್ಸೇನಾ ಅವರು ಅಮಿತಾಬ್ ಬಚ್ಚನ್ ಅವರಿಗೆ ವಿನಂತಿಸಿ, “ಈ ಹಂತದಲ್ಲಿ ನಾನು ಸ್ಪರ್ಧೆ ತೊರೆಯಲು ಬಯಸುತ್ತೇನೆ, ನನಗಿಂತ ಚಿಕ್ಕವರಾಗಿರುವ ಉಳಿದ ಸ್ಪರ್ಧಿಗಳಿಗೆ ನಾನು ಅವಕಾಶವನ್ನು ನೀಡಲು ಬಯಸುತ್ತೇನೆ… ನಾನು ಗಳಿಸಿದ್ದು ಸಾಕು” ಎಂದು ಇತರರಿಗೆ ಅನುಕೂಲವಾಗಲೆಂದು ಸ್ವಯಂಪ್ರೇರಣೆಯಿಂದ ಆಟದಿಂದ ಕೆಳಗಿಳಿದರು. ಈ ನಡೆಯಿಂದ ತುಂಬಾ ಪ್ರಭಾವಿತರಾದ ಬಿಗ್ ಬಿ ಸರ್, ನಾವು ಇದುವರೆಗೆ ಇಂತಹ ನಡೆಯನ್ನು ಕಂಡಿರಲಿಲ್ಲ. ನಿಮ್ಮ ಶ್ರೇಷ್ಠತೆ ಮತ್ತು ಹೃದಯವೈಶಾಲ್ಯತೆಯಿಂದ ನಾವು ನಿಮ್ಮಿಂದ ಬಹಳಷ್ಟು ಕಲಿಯಬೇಕಾಗಿದೆ ಎಂದು ಬಿಗ್ ಬಿ ಹೇಳುತ್ತಿದ್ದಂತೆ ಪ್ರೇಕ್ಷಕರು ಸಹ ಅವರಿಗೆ ನಿಂತು ಚಪ್ಪಾಳೆ ತಟ್ಟಿದರು.