ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮ ಯಶಸ್ವಿ ಪ್ರದರ್ಶನ ಕಂಡಿದೆ. ಸೀಸನ್ 13 ಇತ್ತೀಚೆಗೆ ಶುರುವಾಗಿದ್ದು, ಅಭಿಮಾನಿಗಳು ಈ ಕಾರ್ಯಕ್ರಮ ಆನಂದಿಸುತ್ತಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಯೊಬ್ಬರಿಗೆ ಕಾರ್ಯಕ್ರಮ ಮುಗಿದ ನಂತರ ತಾವು ಧರಿಸಿರುವ ಸೂಟ್ ನೀಡುವುದಾಗಿ ಬಿಗ್ ಬಿ ಹೇಳಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇತ್ತೀಚೆಗಿನ ಪ್ರೋಮೋದಲ್ಲಿ ಸ್ಪರ್ಧಿ ಹಾಗೂ ಬಿಗ್ ಬಿ ನಡುವಿನ ಸಂಭಾಷಣೆಯು ಮೋಜಿನಿಂದ ಕೂಡಿದೆ. ಸ್ಪರ್ಧಿ ಪ್ರಾಂಶು ತ್ರಿಪಾಠಿ ಅವರು ಅಮಿತಾಬ್ ಬಚ್ಚನ್ ಧರಿಸಿರುವ ಉಡುಪಿನ ಬಗ್ಗೆ ತನ್ನ ಅಭಿಪ್ರಾಯವನ್ನು ಹೇಳಿದ್ದಾರೆ. ತನಗೆ ಆ ಸೂಟ್ ಇಷ್ಟವಾಗಿಲ್ಲ ಎಂಬುದಾಗಿ ಹೇಳಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ಅಮಿತಾಬ್ ಬಚ್ಚನ್ ಧರಿಸಿರುವ ತರಹದ್ದೇ ಸೂಟ್ ತನ್ನ ಬಳಿ ಇದೆಯೆಂದು ಹೇಳಿ ಪ್ರಾಂಶು ತ್ರಿಪಾಠಿ ಅಚ್ಚರಿಗೊಳಿಸಿದ್ದಾರೆ. ಅಲ್ಲದೆ ಅದರಲ್ಲಿರುವ ಪಾಕೆಟ್ ತನಗೆ ಇಷ್ಟವಾಗಿಲ್ಲ, ಅದು ಚೆನ್ನಾಗಿ ಕಾಣುತ್ತಿಲ್ಲ ಎಂದು ಬಚ್ಚನ್ ಧರಿಸಿರುವ ಸೂಟ್ ತೋರಿಸಿ ಹೇಳಿದ್ದಾರೆ. ಇಂಥ ಉಡುಪನ್ನು ಮದುವೆಯಲ್ಲಿ ಧರಿಸಬೇಕು ಎಂದಿದ್ದಾರೆ. ಇದಕ್ಕೆ ಬಿಗ್ ಬಿ ಹಾಗೂ ಪ್ರೇಕ್ಷಕರ ಗ್ಯಾಲರಿ ನಗೆಗಡಲಲ್ಲಿ ತೇಲಿದೆ. ಆಟ ಮುಗಿದ ನಂತರ ಪ್ರಾಂಶುಗೆ ಸೂಟ್ ನೀಡುವುದಾಗಿ ಹೇಳಿ ನಕ್ಕಿದ್ದಾರೆ.
ಮುಂಬರುವ ಸಂಚಿಕೆಯಲ್ಲಿ ಪ್ರಾಂಶು ಅವರಿಗೆ 1 ಕೋಟಿ ರೂ. ಮೌಲ್ಯದ ಪ್ರಶ್ನೆಯನ್ನು ಕೇಳಲಾಗುತ್ತದೆ. 1 ಕೋಟಿ ಪ್ರಶ್ನೆಗೆ ಪ್ರಾಂಶು ಆಡುವ ಭಾಗವು ಮುಂಬರುವ ಸಂಚಿಕೆಯಲ್ಲಿ ಅಂದರೆ ಸೆಪ್ಟೆಂಬರ್ 23ರ ರಾತ್ರಿ ಪ್ರದರ್ಶನಗೊಳ್ಳಲಿದೆ. ಕೆಬಿಸಿ ಸೋಮವಾರದಿಂದ ಶುಕ್ರವಾರದವರೆಗೆ ಸೋನಿ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ.
https://www.instagram.com/p/CUHJ-ZHKIJD/?utm_source=ig_embed&ig_rid=64f336e6-5ea9-430e-9511-8969f1f24056