ಚಾಮರಾಜನಗರ: ಕರ್ನಾಟಕ-ತಮಿಳುನಡು ಗಡಿ ಭಾಗದಲ್ಲಿರುವ ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಕೆ.ಆರ್.ಎಸ್ ಜಲಾಶಯದಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೇನ ಕಲ್ ಬಳಿ ಕಾವೇರಿ ನದಿ ರೌದ್ರಾವತಾರವಾಗಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಜಲಪಾತವೇ ಕಣ್ಮರೆಯಾಗಿದೆ.
ನೀರಿನ ಪ್ರಮಣ ಹೆಚ್ಚಾಗಿದ್ದು, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹೊಗೇನಕಲ್ ನಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಸರಗೂರು, ಅಗ್ರಹಾರ, ಹಳೇ ಹಂಪಾಪುರ ಸೇರಿದಂತೆ 9 ಊರುಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ರಾಜ್ಯದಿಂದ ರಭಸವಾಗಿ ಹರಿಯುತ್ತಿರುವ ಕಾವೇರಿ ತಮಿಳುನಾಡಿನಲ್ಲೂ ಪ್ರವಾಹ ಭೀತಿ ಸೃಷ್ಟಿಸಿದ್ದು, ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕರೂರ್, ತಿರುಚಿ, ತಂಜಾವೂರು ಭಾಗಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.