ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರುನಾಡಲ್ಲಿ ‘ಕಾವೇರಿ’ ಪ್ರತಿಭಟನೆ ಭುಗಿಲೆದ್ದಿದೆ.
ಬೆಂಗಳೂರಿನ ಅತ್ತಿಬೆಲೆ, ಮಲ್ಲೇಶ್ವರಂ ನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಕರವೇ ಕಾರ್ಯಕರ್ತರು ತಲೆ ಮೇಲೆ ಚಪ್ಪಡಿ ಕಲ್ಲು ಇಟ್ಟುಕೊಂಡು ಕಾಲಿ ಕೊಡ ಹಿಡಿದುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಇನ್ನೂ ಕೆಲವು ಪ್ರತಿಭಟನಾಕಾರು ಬಸ್ ಅಡಿ ಮಲಗಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲೂ ಕಾವೇರಿ ಹೋರಾಟ ಭುಗಿಲೆದ್ದಿದ್ದು, ರೈತರಿಂದ ಧರಣಿ ಮುಂದುವರಿದಿದೆ. ಬಾಯಿಗೆ ಮಣ್ಣು ಹಾಕಿಕೊಂಡು ರೈತರು ವಿನೂತನ ಪ್ರತಿಭಟನೆ ಮಾಡಿದ್ದಾರೆಇನ್ನೂ, ಮೈಸೂರಿನಲ್ಲೂ ಕಾವೇರಿ ಕಿಚ್ಚು ಜೋರಾಗಿದೆ. ಮೈಸೂರು ನ್ಯಾಯಾಲಯದ ಮುಂಭಾಗದ ರಸ್ತೆ ತಡೆದು ಮೈಸೂರು ವಕೀಲರು ಪ್ರತಿಭಟನೆ ನಡೆಸಿದ್ದಾರೆ. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮಂಡ್ಯ, ಮದ್ದೂರು ಬಂದ್ ಮಾಡಿ ಬೀದಿಗಿಳಿದು ಹೋರಾಟ ನಡೆಸಿರುವ ರೈತ ಸಂಘಟನೆ, ಕನ್ನಡಪರ ಸಂಘಟನೆ ಕಾರ್ಯಕರ್ತರು, ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿದ್ದಾರೆ. ಇನ್ನೊಂದೆಡೆ ರಸ್ತೆಯಲ್ಲಿಯೇ ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. . ಮದ್ದೂರಿನಲ್ಲಿ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿಸಿರುವ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ವಿರುದ್ಧ ಕಿಡಿಕಾರಿದ್ದಾರೆ. ಹಾಸನದಲ್ಲೂ ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಬೀದಿಗಿಳಿದಿವೆ. ಕರವೇ ಕಾರ್ಯಕರ್ತರು ಹಾಸನದ ಬೂವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ತಡೆದು ಪ್ರತಿಭಟನೆ ನಡೆಸಿದ್ದಾರೆ.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ, ಬಿಎಸ್ ಸದಾನಂದಗೌಡ ಮತ್ತಿತರಿದ್ದಾರೆ. ಮೈಸೂರು ಬ್ಯಾಂಕ್ ವೃತ್ತ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.