ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ.
ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿಯಲ್ಲಿ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಅಪಾರ ಸಂಖ್ಯೆಯ ಭಕ್ತರು ಕಾವೇರಿ ಮಾತೆಗೆ ನಮಿಸಿದ್ದಾರೆ.
ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು.
‘ತಲಕಾವೇರಿ ಜಾತ್ರೆ ಹಿನ್ನೆಲೆ ಭಾಗಮಂಡಲದಿಂದ ತಲಕಾವೇರಿಗೆ ಹಾಗೂ ತಲಕಾವೇರಿಯಿಂದ-ಭಾಗಮಂಡಲಕ್ಕೆ 15 ಬಸ್‍ಗಳಲ್ಲಿ ಭಕ್ತಾಧಿಗಳು ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಹಿನ್ನೆಲೆ ತಾಯಿ ಕಾವೇರಿ ಮಾತೆಯ ಭಕ್ತಿಗೀತೆಗಳ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಭಕ್ತಾಧಿಗಳ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರೆ ನಡೆಯಲಿದ್ದು, ಈ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾಧಿಗಳು,ಯಾಥ್ರಾರ್ಥಿಗಳು ಶ್ರೀ ಕಾವೇರಿಯ ಪವಿತ್ರ ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್‍ಗಳ ಬಳಕೆ ಮಾಡದಂತೆ ಸೂಚಿಸಲಾಯಿತು.