ಬೆಂಗಳೂರು: ಶಿಕ್ಷಕರ ನೇಮಕಾತಿ ಸಂಬಂಧ ತಂದೆಯ ಆದಾಯ ಪ್ರಮಾಣ ಪತ್ರ ಮಾತ್ರ ಪರಿಗಣಿಸಬೇಕು ಎಂದು ಕೋರಿ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ತಿರಸ್ಕರಿಸಿದೆ.
ಬೆಂಗಳೂರಿನ ನಳಿನ ಮೊದಲಾದವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತ ಸದಸ್ಯರ ಎನ್. ಶಿವಶೈಲಂ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಇದರಿಂದ ಈ ಅಭ್ಯರ್ಥಿಗಳು ಮತ್ತೆ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಮತ್ತು ಯೋಗೇಶ್ವರಿ ನಡುವಿನ ಪ್ರಕರಣದಲ್ಲಿ ಪೋಷಕರ ಆದಾಯ ಪ್ರಮಾಣ ಪತ್ರವನ್ನೇ ಪರಿಗಣಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಪ್ರಕರಣದಲ್ಲಿಯೂ ಅರ್ಜಿದಾರರು ಸಲ್ಲಿಸಿದ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸಿ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತು ಕೌನ್ಸಿಲಿಂಗ್ ಅವಕಾಶ ಮಾಡಿಕೊಡುವಂತೆ ಆದೇಶ ನೀಡುವಂತೆ ಮನವಿ ಮಾಡಿದ್ದರು.