ಎಲ್ಲಿಗಾದರೂ ಪ್ರವಾಸ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಒಮ್ಮೆ ಕಳೆದುಹೋದರೆ, ಅವುಗಳನ್ನು ಪತ್ತೆ ಹಚ್ಚಲು ಮತ್ತು ಹಿಂಪಡೆಯಲು ಬಹಳ ಕಷ್ಟವಾಗುತ್ತದೆ. ಜಾತ್ರೆ, ಸಮಾರಂಭ ಅಂತಾ ಎಲ್ಲಿಗಾದ್ರೂ ಹೋಗುವಾಗ ಚಿನ್ನ ಧರಿಸುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಒಮ್ಮೆ ಕಳೆದು ಹೋದ್ರೆ, ಮತ್ತೆ ಸಿಗೋದು ಕಷ್ಟ.
ಆದರೆ, ಸೂರತ್ ಕುಟುಂಬಸ್ಥರಿಗೆ ತಮ್ಮ ಕಳೆದುಹೋದ ಆಭರಣಗಳು ಮರಳಿ ಸಿಗುತ್ತದೆ. ವ್ಯಾಪಾರಿಗಳು ಅತ್ಯಂತ ನಿಷ್ಠರಾಗಿರುವುದರಿಂದ ಅವರ ಚಿನ್ನವನ್ನು ವಾಪಸ್ ಮಾಡಿದ್ದಾರೆ. ಹೌದು, ಸೂರತ್‌ನ ಕುಟುಂಬವೊಂದು ಕಣಿವೆ ರಾಜ್ಯದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದಾರೆ.
ಅವರ ಅದೃಷ್ಟವೋ ಏನೋ ಆಭರಣಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಭರಣಗಳನ್ನು ಹಿಂದಿರುಗಿಸಲು ಇಬ್ಬರು ಕುದುರೆ ಕೀಪರ್ ಗಳು ಸುಮಾರು 70 ಕಿ.ಮೀ ದೂರ ಪ್ರಯಾಣಿಸಿದ್ದಾರೆ.
ರಫೀಕ್ ಮತ್ತು ಅಫ್ರೋಜ್ ಎಂಬುವವರು ಕುದುರೆ ಸವಾರಿ ವ್ಯಾಪಾರ ನಡೆಸುತ್ತಾರೆ. ಹಿಮದಿಂದ ಆವೃತವಾದ ಬೆಟ್ಟಗಳ ಮೂಲಕ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಾರೆ. ಸೂರತ್‌ನಿಂದ ಬಂದ ಪ್ರವಾಸಿಗರು ಈ ವೇಳೆ ತಮ್ಮ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಪಹಲ್ಗಾಮ್‌ನಿಂದ ಶ್ರೀನಗರಕ್ಕೆ ಬರುವವರೆಗೂ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ.
ಆದರೆ ಆಭರಣಗಳು ಸಿಕ್ಕ ವೇಳೆ ಅವುಗಳನ್ನು ಹಿಂದಿರುಗಿಸಲು ಪಹಲ್ಗಾಮ್‌ನಿಂದ ಶ್ರೀನಗರಕ್ಕೆ 70 ಕಿ.ಮೀ ದೂರ ಪ್ರಯಾಣಿಸಿ ಬಂದು ಮಾಲೀಕರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಪ್ರಪಂಚದಲ್ಲಿ ಉತ್ತಮರೂ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಚಿನ್ನಾಭರಣಗಳನ್ನು ಮರಳಿ ಪಡೆದಿದ್ದಕ್ಕೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ. ರಫೀಕ್ ಮತ್ತು ಅಫ್ರೋಜ್ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ.