ಕಾಶ್ಮೀರದಲ್ಲೀಗ ಹಳದಿ ಕ್ರಾಂತಿಯಾಗ್ತಿದೆ. ಕಾಶ್ಮೀರದ ಸೇಬಿಗೆ ಪ್ರಸಿದ್ಧಿ ಪಡೆದಿದ್ದ ಕಣಿವೆ ಪ್ರದೇಶ ಇದೀಗ ಸಾಸಿಗೆ ಉತ್ಪಾದನೆಯಲ್ಲೂ ಮುನ್ನುಗ್ಗುತ್ತಿದೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ, ಸಾವಿರಾರು ಹೆಕ್ಟೇರ್ ಭೂಮಿಯನ್ನು ಸಾಸಿವೆ ಕೃಷಿಗಾಗಿ ಬಳಸಿಕೊಂಡಿದ್ದು ಕಾಶ್ಮೀರ ಕಣಿವೆಯು ಮೌನವಾಗಿ ಹಳದಿ ಕ್ರಾಂತಿ ನಡೆಸ್ತಿದೆ.
ಮೊದಲು ಕಾಶ್ಮೀರದ ಹೆಚ್ಚಿನ ಭೂಮಿಯನ್ನು ಒಂದೇ ಬೆಳೆ ಬೆಳೆಯಲು ಮಾತ್ರ ಬಳಸಲಾಗುತ್ತಿತ್ತು . ಹೆಚ್ಚಿನ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಈಗ ರೈತರು ದೇಶದ ಇತರ ಭಾಗಗಳಂತೆ ಖಾರಿಫ್ ಮತ್ತು ರಬಿ ಋತುಗಳಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಜಮ್ಮು ಕಾಶ್ಮೀರದ ಹವಾಮಾನ ಪರಿಸ್ಥಿತಿಗಳು ವೈವಿಧ್ಯಮಯವಾಗಿವೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಯವರ ಗುರಿಯಡಿಯಲ್ಲಿ, ನಾವು ರಬಿ ಋತುವಿನಲ್ಲಿ ಸಾಸಿವೆ ಬೆಳೆಯುವ ಪ್ರದೇಶವನ್ನು ಹೆಚ್ಚಿಸಲು ಕಸರತ್ತು ಕೈಗೊಂಡಿದ್ದೇವೆ ಎಂದು ಕೃಷಿ ನಿರ್ದೇಶಕ ಚೌಧರಿ ಮೊಹಮ್ಮದ್ ಇಕ್ಬಾಲ್ ತಿಳಿಸಿದ್ದಾರೆ.
2020-2021 ರಲ್ಲಿ ಸಾಸಿವೆ ಬೆಳೆಯುವ ಪ್ರದೇಶ ಕೇವಲ 30,000 ಹೆಕ್ಟೇರ್ ಆಗಿತ್ತು. 2021-2022 ರಲ್ಲಿ,ನಾವು 1.01 ಲಕ್ಷ ಹೆಕ್ಟೇರ್ ಭೂಮಿಯನ್ನು ಸಾಸಿವೆ ಕೃಷಿಗೆ ಒಳಪಡಿಸುವ ಗುರಿಯನ್ನು ಹೊಂದಿದ್ದು ಅದನ್ನು ಸಾಧಿಸಿದ್ದೇವೆ. ಪ್ರಸಕ್ತ ವರ್ಷ 2022-2023 ರಲ್ಲಿ ನಾವು 1.40 ಲಕ್ಷ ಹೆಕ್ಟೇರ್ ಭೂಮಿಯನ್ನು ಸಾಸಿವೆ ಕೃಷಿಗೆ ಒಳಪಡಿಸಿದ್ದೇವೆ ಎಂದು ಹೇಳಿದರು.
ಸಾಸಿವೆ ಕೃಷಿಯು ಯಶಸ್ಸು ಕಂಡಿದ್ದು ನಮ್ಮಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಇದ್ದು, ಸಾಸಿವೆ ಈಗಾಗಲೇ ಅದನ್ನೂ ಮೀರಿದೆ. ಜಲಾವೃತವಾಗಿರುವ ಜಮೀನುಗಳನ್ನು ಹೊರತುಪಡಿಸಿ, ಸಾಧ್ಯವಾದಷ್ಟು ಭೂಮಿಯನ್ನು ಸಾಸಿವೆ ಕೃಷಿಗೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಕಾಶ್ಮೀರದ ಆಹಾರದಲ್ಲಿ ತೈಲವು ಪ್ರಧಾನವಾಗಿದ್ದು ಕಣಿವೆ ರಾಜ್ಯವು ಈ ಹಿಂದೆ ತೈಲ ಬೇಡಿಕೆಯನ್ನು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿತ್ತು ಎಂಬುದನ್ನ ಅವರು ಉಲ್ಲೇಖಿಸಿದರು.