ಚಿಕ್ಕಮಗಳೂರು: ಸಾವಿರರು ಎಕರೆ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಕೆಎಎಸ್ ಅಧಿಕಾರಿ ಉಮೇಶ್ ರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಡೂರು ಜೆಎಂಎಫ್ ಸಿ ನ್ಯಾಯಾಲಯ ಕೆಎಎಸ್ ಅಧಿಕಾರಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ತರೀಕೆರೆ ಡಿವೈ ಎಸ್ ಪಿ ವಿ.ಎಸ್.ಹಾಲಮೂರ್ತಿರಾವ್ ನೇತೃತ್ವದ ತನಿಖಾ ತಂಡ ಕಡೂರು ಕಂದಾಯ ಭೂಮಿ ಅಕ್ರಮದ ಬಗ್ಗೆ ವರದಿ ಸಲ್ಲಿಸಿದೆ. ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಕಡೂರು ತಹಶ್ಲೀಲ್ದಾರ್ ಆಗಿದ್ದ ಉಮೇಶ್, ಬಳಿಕ ಕಾರವಾರ ಸೀಬರ್ಡ್ ನೌಕಾ ನೆಲೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ಉಮೇಶ್ ಕಡೂರು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲೇ ಅತಿ ಹೆಚ್ಚು ಅಕ್ರಮ ನಡೆದಿರುವುದು ಬಹಿರಂಗವಾಗಿದೆ. 3,500 ಎಕರೆ ಕಂದಾಯ ಭೂಮಿ ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.