
ಬೆಂಗಳೂರು: ವಿಶ್ವ ಒಕ್ಕಲಿಗ ಮಠ ಮಹಾಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ದೀಕ್ಷೆ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗ ಮಠ ಮಹಾಸಂಸ್ಥಾನದಲ್ಲಿ ನೂರಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಕಾರ್ಯಕ್ರಮ ನೆರವೇರಿತು. ಡಾ.ಹೆಚ್.ಎಲ್.ನಾಗರಾಜ್, ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಉತ್ತರಾಧಿಕಾರಿಯಾಗಿ ಪೀಠಾಧಿಪತಿಗಳಾಗಿ ದೀಕ್ಷೆ ಸ್ವೀಕರಿಸಿದ್ದಾರೆ.
ಡಾ.ನಾಗರಾಜ್ ಸನ್ಯಾಸತ್ವ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಹೆಸರು ಬದಲಿಸಲಾಗಿದೆ. ಇದೇ ವೇಳೆ ಮಾತನಾಡಿದ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಶ್ರೀಗಳು, ಎರಡು ಮಠಗಳ ನಡುವೆ ಯಾವುದೇ ಸಮಸ್ಯೆಗಳಿಲ್ಲ. ಒಂದೇ ಗುರು, ಒಂದೇ ಸಮುದಾಯ, ಒಂದೇ ತಾಯಿ ಎಂದು ಪೂಜ್ಯರು ಹೇಳಿದ್ದಾರೆ. ಮುಂದೆಯೂ ಯಾವುದೇ ಸಮಸ್ಯೆಯಾಗದು. ನಾಗರಾಜ್ ಅವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭಕ್ಕೆ ಇಷ್ಟೊಂದು ಜನ ಸೇರಿದ್ದು ಸಂತಸದ ವಿಚಾರರ. ನಾವೆಲ್ಲರೂ ಒಂದೇ ಗುರು ಪರಂಪರೆಯವರು. ಕಾಲದ ಸಂದರ್ಭದಲ್ಲಿ ಇಂದು ನಿಶ್ಚಲಾನಂದನಾಥ ಸ್ವಾಮೀಗಳು ಕಂಕಣ ತೊಟ್ಟು ಸಮಾಜದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ ಎಂದು ಹೇಳಿದರು.