
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ವತಿಯಿಂದ ನಡೆಸಲಾಗುತ್ತಿರುವ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆ.ಎಸ್.ಎ.ಟಿ.) ಮಧ್ಯಂತರ ತಡೆ ನೀಡಿದೆ.
ಡಿ ಪವಿತ್ರಾ ಸೇರಿದಂತೆ 51 ಅಭ್ಯರ್ಥಿಗಳು ಈ ಕುರಿತಾಗಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮಂಡಳಿ ನ್ಯಾಯಾಂಗ ಸದಸ್ಯ ಎಸ್.ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠವು ಈ ಬಗ್ಗೆ ಆದೇಶ ನೀಡಿದ್ದು, ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಲಾಗಿದೆ.
2025ರ ಜನವರಿ 30ರಂದು ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡಿದ್ದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಇದೀಗ ಮುಖ್ಯ ಪರೀಕ್ಷೆ ನಡೆಸಲು ಆಯೋಗವು ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆಯವರೆಗೆ ಅಮಾನತಿನಲ್ಲಿ ಇರಿಸಲು ಆದೇಶ ನೀಡಿದೆ.