ಬೆಂಗಳೂರು: ಡಿಸೆಂಬರ್ ನಲ್ಲಿ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ಚಿಂತನೆ ನಡೆಸಿದೆ.
ಕಳೆದ ಆಗಸ್ಟ್ ನಲ್ಲಿ ಗೆಜೆಟೆಡ್ ಪಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಹಲವು ದೋಷ ಕಂಡುಬಂದ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಮರು ಪರೀಕ್ಷೆ ನಡೆಸಲು ಯೋಜಿಸಲಾಗಿದೆ.
ಆ. 27ರಂದು 364 ಕೆಎಎಸ್ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರ ಲೋಪ ದೋಷ, ಇಸವಿಯಲ್ಲಿ ತಪ್ಪುಗಳು ಕಂಡುಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಸಾಹಿತ್ಯ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮರು ಪರೀಕ್ಷೆಗೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದ್ದರು.
ಅಕ್ಟೋಬರ್ ನಲ್ಲಿ ಹಬ್ಬದ ರಜೆ ಮತ್ತು ಬೇರೆಬೇರೆ ಪರೀಕ್ಷೆ ನಿಗದಿಯಾಗಿವೆ. ನವೆಂಬರ್ ನಲ್ಲಿಯೂ ಸೂಕ್ತ ದಿನಾಂಕ ಲಭ್ಯವಾಗದ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಯಾವುದಾದರೂ ಒಂದು ಭಾನುವಾರ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.