ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 384 ಕೆಎಎಸ್ ಹುದ್ದೆಗಳಿಗೆ ಆ. 27 ರಂದು ಪೂರ್ವಭಾವಿ ಪರೀಕ್ಷೆ ಮರು ನಿಗದಿಪಡಿಸಿದೆ.
ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:25-08-2024ರಂದು ನಡೆಸಲು ನಿಗದಿಪಡಿಸಲಾಗಿತ್ತು.
ಸದರಿ ದಿನದಂದು ಐ.ಬಿ.ಪಿ.ಎಸ್. ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಲಾಗಿ ಸದರಿ ಪೂರ್ವಭಾವಿ ಪರೀಕ್ಷೆಗೆ ಆಯೋಗವು ಎಲ್ಲಾ ಪರೀಕ್ಷಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶ ನೀಡದೆ, ಬೇರೆ ಪರೀಕ್ಷೆಗಳೊಂದಿಗೆ Overlap ಆಗದಂತೆ ಅಲ್ಪಕಾಲ ಮುಂದೂಡಲು ನಿರ್ಧರಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ದಿನಾಂಕ:27-08-2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಮರುನಿಗದಿಪಡಿಸಲು ಆಯೋಗವು ತೀರ್ಮಾನಿಸಿದೆ. ಅಭ್ಯರ್ಥಿಗಳು ದಿನಾಂಕ:15-08-2024ರ ನಂತರ ಪ್ರವೇಶ ಪತ್ರವನ್ನು ಆಯೋಗದ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಉಳಿದಂತೆ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ.
ದಿನಾಂಕ:27-08-2024 ಕಾರ್ಯ ನಿರ್ವಹಣಾ(working day) ದಿನವಾಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ರಾಜ್ಯದ ಎಲ್ಲಾ ಜಿಲ್ಲೆಗಳ ಪರೀಕ್ಷಾ ಉಪಕೇಂದ್ರಗಳಿಗೆ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಷಿಸಲು ಹಾಗೂ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿ ತಿಳಿಸಿದ್ದಾರೆ.