ಬೆಂಗಳೂರು: ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಕನ್ನಡ ಅನುವಾದದಲ್ಲಿ ಲೋಪಗಳಿದ್ದ ಕಾರಣ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡಿ ಎರಡು ತಿಂಗಳೊಳಗೆ ಮರು ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಆದರೆ, ಈ ಘೋಷಣೆ ಹೊರಬಿದ್ದು ಮೂರು ವಾರಗಳೇ ಕಳೆದರೂ ಕರ್ನಾಟಕ ಲೋಕಸೇವಾ ಆಯೋಗದಿಂದ ಮರು ಪರೀಕ್ಷೆಗೆ ದಿನಾಂಕ ನಿಗದಿ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ.
ಹೀಗಾಗಿ ಪರೀಕ್ಷೆ ತೆಗೆದುಕೊಂಡಿದ್ದ ಸುಮಾರು 2.50 ಲಕ್ಷ ಅಭ್ಯರ್ಥಿಗಳು ಸೇರಿದಂತೆ ಲಕ್ಷಾಂತರ ನಾಗರಿಕ ಸೇವಾ ಆಕಾಂಕ್ಷಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಪರೀಕ್ಷೆಗೆ ತಯಾರಿ ಮುಂದುವರೆಸಬೇಕೇ ಬೇಡವೇ ಎನ್ನುವ ಗೊಂದಲ ಅಭ್ಯರ್ಥಿಗಳಲ್ಲಿದೆ. ಬೇರೆ ನೇಮಕಾತಿ ಪರೀಕ್ಷೆಗಳನ್ನು ಕೂಡ ತೆಗೆದುಕೊಳ್ಳುವ ಬಗ್ಗೆ ಗೊಂದಲದಲ್ಲಿದ್ದಾರೆ.
ಸರ್ಕಾರ ಲೋಕಸೇವಾ ಆಯೋಗದೊಂದಿಗೆ ಸಮಾಲೋಚನೆ ನಡೆಸದೆ ಏಕಾಏಕಿ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ ಎರಡು ತಿಂಗಳಲ್ಲಿ ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಆಯೋಗದ ಸಭೆಯಲ್ಲಿ ಮರು ಪರೀಕ್ಷೆಯ ಬಗ್ಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.
ಇನ್ನು ಡಿಸೆಂಬರ್ ವರೆಗೆ ವಿವಿಧ ಪರೀಕ್ಷೆಗಳು ನೇಮಕಾತಿ ಪರೀಕ್ಷೆಗಳು ನಿಗದಿಯಾಗಿವೆ. ಅ. 3ಪಿಎಸ್ಐ ನೇಮಕಾತಿ ಪರೀಕ್ಷೆ, ಅ. 27, 29ರಂದು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ, ಸೆ. 29, ಅ.26 ಆರರಂದು ಜಿಟಿಟಿಸಿಯ ವಿವಿಧ ಹುದ್ದೆಗಳ ಪರೀಕ್ಷೆ, ಅ.ರ್ 20ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು, ತಾಲೂಕು ಅಧಿಕಾರಿಗಳ ಹುದ್ದೆ ಪರೀಕ್ಷೆ, 14ರಂದು ಕೆ –ಸೆಟ್, ನ. 24ರಂದು ಸಹಾಯಕ ಪ್ರಾಧ್ಯಾಪಕರು, ನ. 16, 17ರಂದು ಹೈದರಾಬಾದ್ ಕರ್ನಾಟಕ ವೃಂದದ ಪಿಡಿಒ ನೇಮಕಾತಿ ಪರೀಕ್ಷೆ, ಡಿ. 7, 8ರಂದು ಉಳಿಕೆ ಮೂಲ ವೃಂದದ ಪಿಡಿಒ ನೇಮಕಾತಿ ಪರೀಕ್ಷೆ ನಡೆಸಲಾಗುವುದು.
ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕೆಪಿಎಸ್ಸಿ ಡಿಸೆಂಬರ್ ವರೆಗೆ ಈಗಾಗಲೇ ಅನೇಕ ನೇಮಕಾತಿ ಪರೀಕ್ಷೆ ನಿಗದಿ ಮಾಡಿ ವೇಳಾಪಟ್ಟಿ ಪ್ರಕಟಿಸಿವೆ. ಸರ್ಕಾರ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ನೀಡಿದೆ. ಈಗಾಗಲೇ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸುವುದರಿಂದ ಅಂತಹ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎನ್ನಲಾಗಿದೆ.