ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದೆ.
ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ -1, ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪತ್ರಿಕೆ -2ರ ಪರೀಕ್ಷೆ ನಡೆಸಲಾಗುವುದು. ಸರ್ಕಾರಿ ಸೇವಾ ನಿರತರು ಅರ್ಜಿ ಸಲ್ಲಿಸಿದ್ದಲ್ಲಿ ಅವರು ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಆಗಸ್ಟ್ 27ರಂದು ಒಂದು ದಿನದ ಸಾಂದರ್ಭಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪರೀಕ್ಷೆ ನಡೆಯುವ 214 ಸರ್ಕಾರಿ, 189 ಅನುದಾನಿತ, 161 ಖಾಸಗಿ ಶಾಲಾ, ಕಾಲೇಜುಗಳು ಸೇರಿದಂತೆ 564 ಪರೀಕ್ಷಾ ಉಪ ಕೇಂದ್ರಗಳಿಗೆ ವಿಶೇಷ ರಜೆ ನೀಡಲಾಗಿದೆ.
ಇನ್ನು ವಾರಾಂತ್ಯದ ಬದಲು ವಾರದ ದಿನ ಪರೀಕ್ಷೆ ನಡೆಸುತ್ತಿರುವುದರಿಂದ ಅನಾನುಕೂಲವಾಗಲಿದ್ದು, ವಾರಾಂತ್ಯದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಆಯೋಗಕ್ಕೆ ಸೂಚನೆ ನೀಡುವಂತೆ ಕೋರಿ ಕೆಲವು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದಾರೆ.