ಬೆಂಗಳೂರು: ಕರ್ನಾಟಕ ನಾಗರೀಕ ಸೇವಾ ಅಧಿಕಾರಿಗಳ ಗೆಜೆಟೆಡ್ ಪ್ರೊಬೇಷನರಿ ಎ ಮತ್ತು ಬಿ ವೃಂದದ ನೇಮಕಾತಿಗೆ ಕಳೆದ ಡಿಸೆಂಬರ್ 29ರಂದು ನಡೆಸಲಾದ ಪೂರ್ವಭಾವಿ ಮರುಪರೀಕ್ಷೆ ಕೀ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಬುಧವಾರ ಬಿಡುಗಡೆ ಮಾಡಿದೆ.
ಪತ್ರಿಕೆ -1 ಮತ್ತು ಪತ್ರಿಕೆ -2ರ ಕೀ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಸಾಮಾನ್ಯವಾಗಿ ಪರೀಕ್ಷೆ ಮುಗಿದ ಒಂದು ವಾರದೊಳಗೆ ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತಿತ್ತು.
ಆದರೆ ಮರು ಪರೀಕ್ಷೆಯಲ್ಲಿಯೂ ವ್ಯಾಪಕ ದೋಷ ಕಂಡು ಬಂದ ಆರೋಪ ಹಿನ್ನೆಲೆಯಲ್ಲಿ ವಿಳಂಬವಾಗಿ ಕೀ ಉತ್ತರ ಪ್ರಕಟಿಸಲಾಗಿದೆ. ಇದೀಗ ಕೀ ಉತ್ತರ ಪ್ರಕಟಿಸುವ ಮೂಲಕ ಕರ್ನಾಟಕ ಲೋಕಸೇವಾ ಆಯೋಗ ಮರು ಪರೀಕ್ಷೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸಬೇಕೆಂಬ ಅಭ್ಯರ್ಥಿಗಳ ಬೇಡಿಕೆಯನ್ನು ಪರೋಕ್ಷವಾಗಿ ತಳ್ಳಿ ಹಾಕಿದೆ.
ಮರು ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣಿ ಸಲ್ಲಿಸಲು ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಒಂದು ಆಕ್ಷೇಪಣೆಗೆ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ನಿಗದಿತ ನಮೂನೆ ಭರ್ತಿ ಮಾಡಿ ಶುಲ್ಕ ಪಾವತಿಸಿ ಇದೇ 22 ರೊಳಗೆ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದು.
384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ರಾಜ್ಯದ 553 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 2.10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು 1.05 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2024ರ ಆಗಸ್ಟ್ ನಲ್ಲಿ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಭಾರಿ ಎಡವಟ್ಟುಗಳಾದ ಕಾರಣ ಸರ್ಕಾರ ಪರೀಕ್ಷೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿತ್ತು.