ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 29ರಂದು ಪೂರ್ವಭಾವಿ ಪರೀಕ್ಷೆ ಮತ್ತೆ ನಡೆಸಲು ಕೆಪಿಎಸ್ಸಿ ಚಿಂತನೆ ನಡೆಸಿದೆ.
ಮರು ಪರೀಕ್ಷೆಯ ದಿನಾಂಕ ನಿಗದಿಪಡಿಸುವ ಕುರಿತಾಗಿ ಗುರುವಾರದ ಆಯೋಗದ ಸಭೆ ನಡೆಸಲಾಗಿದೆ. ಆಗಸ್ಟ್ 27ರಂದು ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ ನಡೆಸಿದ್ದು. ಪ್ರಶ್ನೆ ಪತ್ರಿಕೆ -1 ಮತ್ತು 2ರಲ್ಲಿ ಅನುವಾದದಲ್ಲಿ ಅನೇಕ ತಪ್ಪುಗಳು ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಘಟನೆಗಳು ಕೂಡ ಮರು ಪರೀಕ್ಷೆಗೆ ಒತ್ತಾಯಿಸಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬಳಿಕ ಆಯೋಗದ ಮೂರು ಸಭೆ ನಡೆದರೂ ಮರು ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗಿಲ್ಲ. ಇದೀಗ ಡಿಸೆಂಬರ್ 29ರಂದು ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ನಡೆಸಲು ದಿನಾಂಕ ನಿಗದಿ ಪಡಿಸುವ ಕುರಿತಾಗಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.