
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಬಳಿ ಅಪರಿಚ ಡ್ರೋನ್ ಹಾರಾಟ ನಡೆಸಿದ್ದು, ಆತಂಕಕ್ಕೆ ಕಾರಣವಾಗಿದೆ.
ವಕ್ಕನಳ್ಳಿಯ ಐಎನ್ ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದರಿಯ ಸುರಂಗ ಮಾರ್ಗದವರೆಗೂ ತಡರಾತ್ರಿ ಡ್ರೋನ್ ಹಾರಾಟ ನಡೆಸಿದೆ. ನೌಕಾನೆಲೆ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ಕ್ಯಾಮರಾ ಹಾಗೂ ಡ್ರೋನ್ ಬಳಕೆ ನಿಷೇಧ ಹೇರಲಾಗಿದೆ. ನಿಷೇಧದ ಹೊರತಾಗಿಯೂ ಡ್ರೋನ್ ಹಾರಾಟ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಥಳೀಯರು ನೌಕಾನೆಲೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. 2-3 ಕಿ.ಮೀ ಎತ್ತರದಲ್ಲಿ ನೈಟ್ ವಿಶನ್ ಡ್ರೋನ್ ಹಾರಾಟ ನಡೆಸಿದೆ. ಸಾಮಾನ್ಯವಾಗಿ 600ರಿಂದ 1200 ಮೀ ಎತ್ತರ ಹಾರುವ ಡ್ರೋನ್ ಸ್ಥಳೀಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಈ ಡ್ರೋನ್ ಸುಮಾರು 3ಕಿ.ಮೀ ವರೆಗೂ ಹೆಚ್ಚು ದೂರ ಹಾರಾಟ ನಡೆಸಿದ್ದು ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ನೌಕಾಪಡೆ ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಮುಂದಾಗಿದೆ.