ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತಗಳು ಕಟ್ಟೆಚ್ಚರ ಘೋಷಿಸಿದೆ. ಆದಾಗ್ಯೂ ಕೆಲ ಪುಂಡರ ಗುಂಪು ಸಮುದ್ರಕ್ಕೆ ಇಳಿದು ಸಾಹಸ ಮೆರೆಯಲು ಹೋಗಿದ್ದು, ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಠಾಗೋರ್ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಕಂಠಪೂರ್ತಿ ಕುಡಿದು ಬಂದ ಪುಂಡರಲ್ಲಿ ಇಬ್ಬರು ಸಮುದ್ರಕ್ಕೆ ಇಳಿದು ಹುಚ್ಚಾಟವಾಡಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿ ಎಷ್ಟೇ ಕೂಗಿ ಹೇಳಿದರೂ ಕೇಳಿಲ್ಲ.
ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಲೈಫ್ ಗಾರ್ಡ್ ಸಿಬ್ಬಂದಿಯೊಂದಿಗೆ ತೆರಳಿ, ಸಮುದ್ರಕ್ಕೆ ಇಳಿದಿದ್ದ ಇಬ್ಬರನ್ನು ಎಳೆದು ದಡಕ್ಕೆ ತಂದಿದ್ದಾರೆ. ಪೊಲೀಸ್ ಸಿಬ್ಬಂದಿ ಇಬ್ಬರಿಗೂ ಲಾಠಿ ಏಟು ನೀಡಿ, ಬೈದು ಬುದ್ಧಿ ಹೇಳಿದ್ದಾರೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಮೀನುಗಾರಿಕೆಗೂ ನಿಷೇಧ ಹೇರಲಾಗಿದ್ದು, ಕಡಲಿಗಿಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.